×
Ad

ಪಾವೂರು ಪ್ರೌಢಶಾಲೆಯಲ್ಲಿ ಮಳೆನೀರು ಮರುಪೂರಣ ಮಾಹಿತಿ

Update: 2016-06-04 18:42 IST

ಕೊಣಾಜೆ, ಜೂ 4:  ಹಿಂದೆಲ್ಲಾ 100ರಿಂದ200 ಅಡಿಯಲ್ಲಿ ನೀರು ಸಿಗುತ್ತಿತ್ತಾದರೂ ಇಂದು 600 ಅಡಿಯಲ್ಲೂ ನೀರು ಸಿಗುತ್ತಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿತ್ತಾದರೂ ಈ ವರ್ಷ ದ.ಕ.ಜಿಲ್ಲೆಯಲ್ಲೂ ನೀರಿನ ಅಭಾವ ಅತಿಯಾಗಿ ಕಾಡಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲೂ ಜಲಕ್ಷಾಮದ ಮುನ್ಸೂಚನೆ ಇದಾಗಿದ್ದು ಈಗಲೇ ಎಚ್ಚರಗೊಳ್ಳಬೇಕು, ಯಾವುದೇ ಖರ್ಚಿಲ್ಲದೆ ಮಳೆಗಾಲದಲ್ಲಿ ತೆರೆದ ಬಾವಿ ಅಥವಾ ಕೊಳವೆ ಬಾವಿಗಳಿಗೆ ನೀರಿಂಗಿಸುವ ಮೂಲಕ ಮುಂದಿನ ವರ್ಷ ನೀರು ಸಮಸ್ಯೆಯಿಂದ ಪಾರಾಗಬಹುದು ಎಂದು ಮಳೆನೀರು ಪೂರಣ ತಜ್ಞ ಅಬ್ದುಲ್ ಖಾದರ್ ಹೇಳಿದರು.

ಎಸ್‌ಬಿಟಿ ಪಾವೂರು ಶಾಖೆ, ನಿರಂತರ ಸೋಶಿಯಲ್ ಸರ್ಕಲ್ ಇದರ ಸಹಯೋಗದಲ್ಲಿ ಶನಿವಾರ ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಜಲಪೂರಣ ಮಾಹಿತಿ ಮತ್ತು ಮಳೆನೀರ ಕೊಯ್ಲು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಹೊಸ ಮನೆ, ಕಟ್ಟಡ ನಿರ್ಮಾಣ ಸಂದರ್ಭ ಸ್ಥಳೀಯ ಸಂಸ್ಥೆಗಳು ಪರವಾನಿಗೆ ನೀಡುವಾಗ ಮಳೆನೀರು ಮರುಪೂರಣ ಕಡ್ಡಾಯಗೊಳಿಸಲಿ. ಇತ್ತೀಚೆಗೆ ಮರಗಳನ್ನು ಅತಿಯಾಗಿ ಕಡಿಯಲಾಗುತ್ತಿದ್ದು ಇದರ ಪರಿಣಾಮ ತಾಪಮಾನ ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿಟ್ಟು ಮರಗಳನ್ನು ಹೆಚ್ಚಾಗಿ ನೆಡುವ ಮೂಲಕ ಮುಂದಿನ ಪೀಳಿಗೆಗೆ ತಾಪಮಾನದಿಂದ ಮುಕ್ತಗೊಳಿಸಬೇಕು. ಶಾಲಾ ಮಟ್ಟದಲ್ಲೇ ಈ ಬಗ್ಗೆ ಜಾಗೃತಿ ಮೂಡಿಸಬೇಕಿದ್ದು, ಪಾವೂರು ಶಾಲೆ ಈ ವಿಷಯದಲ್ಲಿ ಮಾದರಿ ಎಂದರು.

    ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಟಿ.ಫಿರೋಜ್ ಮಾತನಾಡಿ, ಪಾವೂರು ಗ್ರಾಮದಲ್ಲೂ ಈ ವರ್ಷ ನೀರಿನ ಸಮಸ್ಯೆ ಅತಿಯಾಗಿ ಕಾಡಿದೆ, ಪೋಡಾರ್ ಎನ್ನುವ ಪ್ರದೇಶದ ಹೆಂಗಸರು ನೀರು ನೀಡುವಂತೆ ಒತ್ತಾಯಿಸಿ ಕರೆ ಮಾಡಿ ಕಣ್ಣೀರಿಟ್ಟಿದ್ದಾರೆ. ಜಿಲ್ಲೆಯಲ್ಲಿ ಎಷ್ಟೇ ಮಳೆ ಬಂದರೂ ಚರಂಡಿಯಲ್ಲಿ ಹರಿಯುವ ಕಾರಣ ಸಮಸ್ಯೆ ಎದುರಾಗುತ್ತಿದ್ದು, ಮಳೆನೀರು ತಡೆದಿಡುವ ಪ್ರಯತ್ನ ಶಾಲೆಯಿಂದ ಆರಂಭಗೊಂಡಿರುವ ಹೆಮ್ಮೆ ತಂದಿದೆ ಎಂದು ತಿಳಿಸಿದರು.

ನಾಟಿಮದ್ದು ತಜ್ಞ ಉಗ್ಗಪ್ಪ ಪೂಜಾರಿ ನಾಟಿಮದ್ದಿನ ಮಾಹಿತಿ ನೀಡಿದರು. ಎಸ್‌ಬಿಟಿ ಪಾವೂರು ಶಾಖೆಯ ವ್ಯವಸ್ಥಾಪಕ ಅಮಿತ್ ಪುಂದಿರ್ ಹಾಗೂ ಸಿಬ್ಬಂದಿ ಪೂಜಾರ್ ಲೋಕೇಶ್ ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಡಾ.ಪ್ರಶಾಂತ್ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನ ಮಾತನಾಡಿದರು. ಶಿಕ್ಷಕ ಕರುಣಾ ವಂದಿಸಿದರು. ಶಿಕ್ಷಕಿ ಆಶಾವೀರಾವಾಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News