×
Ad

ಟ್ರಂಪ್‌ರ ವಿದೇಶ ನೀತಿ ಅಮೆರಿಕಕ್ಕೆ ಬೆದರಿಕೆಯಾಗಿದೆ: ಹಿಲರಿ ಕ್ಲಿಂಟನ್ ವಾಗ್ದಾಳಿ

Update: 2016-06-04 19:30 IST

ವಾಶಿಂಗ್ಟನ್, ಜೂ. 4: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ವಿದೇಶ ನೀತಿಯನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಹಿಲರಿ ಕ್ಲಿಂಟನ್ ಟೀಕಿಸಿದ್ದಾರೆ.

ಇಲ್ಲಿ ಗುರುವಾರ ಭಾಷಣ ಮಾಡಿದ ಹಿಲರಿ, ತನ್ನ ರಿಪಬ್ಲಿಕನ್ ಎದುರಾಳಿಯನ್ನು ‘‘ಭಯಹುಟ್ಟಿಸುವ’’ ಹಾಗೂ ಅದೇ ವೇಳೆ ‘‘ನಗು ತರಿಸುವ’’ ವ್ಯಕ್ತಿ ಎಂಬುದಾಗಿ ಬಣ್ಣಿಸಿದರು.

ಟ್ರಂಪ್‌ರ ನೀತಿಗಳು ಮತ್ತು ವರ್ತನೆಗಳ ಬಗ್ಗೆ ಹಿಲರಿ ತೀವ್ರ ವಾಗ್ದಾಳಿ ನಡೆಸಿದರು. ಟ್ರಂಪ್ ಶ್ವೇತಭವನಕ್ಕೆ ಆಯ್ಕೆಯಾದರೆ, ಯಾರೋ ಒಬ್ಬರು ತನಗೆ ಕಿರಿಕಿರಿಯಾಗಿದ್ದಾರೆ ಎಂದು ಭಾವಿಸಿ ಅವರ ವಿರುದ್ಧ ಪರಮಾಣು ದಾಳಿಯನ್ನೂ ನಡೆಸಬಹುದು ಎಂದು ವ್ಯಂಗ್ಯವಾಡಿದರು.
‘‘ಡೊನಾಲ್ಡ್ ಟ್ರಂಪ್‌ರ ಕಲ್ಪನೆಗಳು ಭಿನ್ನ ಮಾತ್ರವಲ್ಲ, ಅವುಗಳು ಅಪಾಯಕಾರಿ ಮಟ್ಟದಲ್ಲಿ ಅಸಂಗತವೂ ಹೌದು’’ ಎಂದು ಕ್ಯಾಲಿಫೋರ್ನಿಯದ ಸ್ಯಾನ್‌ಡೀಗೊದಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಹಿಲರಿ ಅಭಿಪ್ರಾಯಪಟ್ಟರು. ‘‘ಅವುಗಳು ವಾಸ್ತವವಾಗಿ ಕಲ್ಪನೆಗಳೂ ಅಲ್ಲ, ಕೇವಲ ವಿಚಿತ್ರ ಹೇಳಿಕೆಗಳು, ವೈಯಕ್ತಿಕ ದ್ವೇಷಸಾಧನೆಯ ಮಾತುಗಳು ಹಾಗೂ ಸಾರಾಸಗಟು ಸುಳ್ಳುಗಳು’’ ಎಂದರು.

ನವೆಂಬರ್ 8ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಡೆಮಾಕ್ರಟಿಕ್ ಪಕ್ಷವನ್ನು ಪ್ರತಿನಿಧಿಸುವ ಸಾಧ್ಯತೆಗಳು ಹೆಚ್ಚಾಗಿವೆ. ವರ್ಮಂಟ್‌ನ ಸೆನೆಟರ್ ಬರ್ನೀ ಸ್ಯಾಂಡರ್ಸ್ ಕೂಡ ಡೆಮಾಕ್ರಟಿಕ್ ಟಿಕೆಟ್‌ಗಾಗಿ ಸ್ಪರ್ಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News