ರಿಕ್ಷಾ ಚಾಲಕನ ಮೇಲೆ ಹಲ್ಲೆ: ಓರ್ವ ಆರೋಪಿಯ ಬಂಧನ
ಪುತ್ತೂರು : ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕಳೆದ ಗುರುವಾರ ಪುತ್ತೂರು ನಗರದ ಹೊರವಲಯದ ಮಂಜಲಪಡ್ಪು ಎಂಬಲ್ಲಿ ರಿಕ್ಷಾ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿದ ತಂಡದ ಓರ್ವ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರಾದ ಮುಂಡೂರು ಗ್ರಾಮದ ಕಂಪ ನಿವಾಸಿ ಲವಕುಮಾರ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿತ್ತು, ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರು ನಗರದ ಹೊರವಲಯದ ನೆಹರೂನಗರ ನಿವಾಸಿ ಉಮ್ಮರ್ ಎಂಬವರ ಪುತ್ರ ರಿಕ್ಷಾ ಚಾಲಕ ಅಹಮ್ಮದ್ ಮುಸ್ತಾಫ ಎಂಬಾತನನ್ನು ಬಂಧಿಸಿದ್ದಾರೆ.
ರಿಕ್ಷಾ ಚಾಲಕ ಲವಕುಮಾರ್ ಅವರು ಗುರುವಾರ ತನ್ನ ರಿಕ್ಷಾಕ್ಕೆ ಗ್ಯಾಸ್ ತುಂಬಿಸಲೆಂದು ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿರುವ ಕೊಂಕಣ್ ಗ್ಯಾಸ್ ಸಂಸ್ಥೆಗೆ ತೆರಳಿದ್ದ ವೇಳೆಯಲ್ಲಿ ಅಲ್ಲಿಗೆ ಅಗಮಿಸಿದ್ದ ಅಹಮದ್ ಮುಸ್ತಫಾ ನಡುವೆ ಸರದಿಯಲ್ಲಿ ಬರುವ ವಿಚಾರದಲ್ಲಿ ವಾಗ್ವಾದ ನಡೆದು ಆರೋಪಿ ಮತ್ತು ಆತನೊಂದಿಗೆ ಇದ್ದವರು ಲವಕುಮಾರ್‌ಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು. ತನಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆನಡೆಸಿ ಬೆದರಿಕೆಯೊಡ್ಡಿದ್ದು ಬಳಿಕ ಅವರೊಂದಿಗೆ ಕೆಲವರು ಸೇರಿಕೊಂಡು ಹಲ್ಲೆ ನಡೆಸಿ, ರಿಕ್ಷಾವನ್ನು ದೂಡಿಕೊಂಡು ಹೋಗಿದ್ದರು ಎಂದು ಲವಕುಮಾರ್ ಪೊಲೀಸರಿಗೆ ದೂರು ನೀಡಿದ್ದರು.
ಘಟನೆಯ ಹಿನ್ನಲೆಯಲ್ಲಿ ಅಂದು ಬಿಎಂಎಸ್ ರಿಕ್ಷಾ ಚಾಲಕ ಮಾಲಕ ಸಂಘಟನೆಯ ರಿಕ್ಷಾಚಾಲಕರು ಪುತ್ತೂರು ನಗರ ಠಾಣೆಯ ಎದುರು ಜಮಾಯಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದರು.
ಬಂಧಿತ ಆರೋಪಿ ಅಹಮ್ಮದ್ ಮುಸ್ತಾಫನನ್ನು ಪುತ್ತೂರು ನಗರ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ಆರೋಪಿಯ ಪರವಾಗಿ ವಕೀಲರಾದ ಮಹೇಶ್ ಕಜೆ, ಪ್ರಸಾದ್‌ಕುಮಾರ್ ರೈ ವಾದಿಸಿದ್ದರು.