ಪುತ್ತೂರು: ಪೊಲೀಸರ ಬೇಡಿಕೆ ಈಡೇರಿಸುವಂತೆ ಆಗ್ರಹ
ಪುತ್ತೂರು : ಪೊಲೀಸರ ವಿವಿಧ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಶನಿವಾರ ಪುತ್ತೂರಿನ ಮಿನಿ ವಿಧಾನಸೌಧದ ಎದುರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಪುತ್ತೂರು ಘಟಕ ಹಾಗೂ ದ.ಕ., ಉಡುಪಿ ಜಿಲ್ಲಾ ಫೋಟೊಗ್ರಾಫರ್ಸ್ ಎಸೋಸಿಯೇಶನ್ ಪುತ್ತೂರು ವಲಯದ ಜಂಟಿ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪುತ್ತೂರು ಘಟಕದ ಅಧ್ಯಕ್ಷ ಸಂದೀಪ್ ಲೋಬೋ ಅವರು ಸಮಾಜದ ರಕ್ಷಣೆಯ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ರಾತ್ರಿ ಹಗಲೆನ್ನದೆ ದುಡಿಯುತ್ತಿರುವ ಪೊಲೀಸರು ಇಂದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ. ಪೊಲೀಸರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳು ಸಿಗುತ್ತಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣವಾಗಿದ್ದು , ಸರ್ಕಾರ ತಕ್ಷಣ ಪೊಲೀಸರ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಫೋಟೋ ಗ್ರಾಫರ್ಸ್ ಎಸೋಸಿಯೇಶನ್ ಪುತ್ತೂರು ವಲಯದ ಮಾಜಿ ಅಧ್ಯಕ್ಷ ಸುಧೀರ್ ಶೆಟ್ಟಿ ಮಿತ್ತೂರು ಅವರು ಮಾತನಾಡಿ, ಪೊಲೀಸರಿಗೆ ಎಷ್ಟೋ ವರ್ಷದಿಂದ ಸಿಗಬೇಕಾದ ಸವಲತ್ತುಗಳು ಈ ತನಕವೂ ಸಿಗುತ್ತಿಲ್ಲ. ಬೇಡಿಕೆಗಳ ಪೈಕಿ ಶೇ.75 ರಷ್ಟನ್ನಾದರೂ ಈಡೇರಿಸಲು ಸರ್ಕಾರ ಮುಂದಾಗಬೇಕಿತ್ತು. ಇದೀಗ ಬೇಡಿಕೆಗಳ ಈಡೇರಿಕೆಗಾಗಿ ಪೊಲೀಸರು ಪ್ರತಿಭಟನೆ ನಡೆಸಲು ಸಿದ್ಧರಾದರೆ ಪ್ರತಿಭಟನೆಯನ್ನೇ ಹತ್ತಿಕ್ಕುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಪೊಲೀಸರು ಬೀದಿಗಿಳಿಯುವ ಮುನ್ನ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದರು.
ದಲಿತ್ ಸೇವಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಗಿರಿಧರ್ ನಾಯ್ಕ ಅವರು ಪ್ರಸ್ತುತ ಕೇರಳ ರಾಜ್ಯದಲ್ಲಿ ಪೊಲೀಸರಿಗೆ 30 ರಿಂದ 35 ಸಾವಿರದಷ್ಟು ವೇತವಿದ್ದರೂ ರಾಜ್ಯದಲ್ಲಿ ಕೇವಲ 16 ಸಾವಿರ ಮಾತ್ರ ನೀಡಲಾಗುತ್ತಿದೆ. ಕರ್ತವ್ಯದ ಅವಧಿಯೂ ಇಲ್ಲಿ ಹೆಚ್ಚಿದೆ. ಪೊಲೀಸ್ ಸಿಬ್ಬಂದಿ ಕೊರತೆಯೂ ಇದೆ ಎಂದರು. ತಕ್ಷಣ ರಾಜ್ಯ ಸರ್ಕಾರ ಪೊಲೀಸರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮತ್ತಷ್ಟು ಸಂಘಟನೆಗಳ ಮುಖಾಂತರ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಅವರು ಎಚ್ಚರಿಸಿದರು. ಚಿಗುರು ಗೆಳೆಯರ ಬಳಗದ ರತ್ನಾಕರ ಅವರು ಮಾತನಾಡಿ, ಪೊಲೀಸರನ್ನು ಸರ್ಕಾರ ಹೀನಾಯವಾಗಿ ನೋಡುವ ಬದಲು ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಗುಣಕರ, ಹಮೀದ್ ಬೊಳ್ವಾರ್ ಮತ್ತಿತರರು ಇದ್ದರು.
ಪ್ರತಿಭಟನಾ ಸಭೆಯ ಬಳಿಕ ಪೊಲೀಸರ ಸುಮಾರು 21 ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಉಪವಿಭಾಗಾಧಿಕಾರಿ ಕಚೇರಿಯ ಮೆನೇಜರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.