×
Ad

ಮಂಗಳೂರು: ಡ್ರೋಣ್ ಮೂಲಕ ಬೀಜ ಬಿತ್ತನೆ

Update: 2016-06-04 21:13 IST

ದೇಶದಲ್ಲಿಯೇ ಪ್ರಥಮ ಬಾರಿಗೆ ವಿಕಾಸ್ ಕಾಲೇಜ್ ಆವರಣದಲ್ಲಿ ಹೊಸ ಪ್ರಯೋಗ ಮಂಗಳೂರು,ಜೂ.4:ದೇಶದಲ್ಲಿ ಪ್ರಥಮ ಬಾರಿಗೆ ಡ್ರೋಣ್ ಮೂಲಕ ಬೀಜ ಬಿತ್ತನೆ ಕಾರ್ಯಕ್ರಮವನ್ನು ಇಲ್ಲಿನ ವಿಕಾಸ್ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಯಿತು.ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ಡ್ರೋಣ್ ಮೂಲಕ ಬೀಜ ಬಿತ್ತನೆ ಮಾಡುವ ಪ್ರಾತ್ಯಕ್ಷತೆಗೆ ಚಾಲನೆ ನೀಡಿದರು.

ನಗರದ ವಿಕಾಸ್ ಕಾಲೇಜ್ ಹಾಗೂ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಈ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು.

ಡ್ರೋಣ್ ಮೂಲಕ ಬೀಜ ಬಿತ್ತನೆ ಕಾರ್ಯ:-3ಡಿ ಏರಿಯಲ್ ಸರ್ವೆ ಹೊಂದಿರುವ ಡ್ರೋಣ್‌ನ್ನು ಬೀಜ ಬಿತ್ತನೆ ಮಾಡಬೇಕಾದ ಕಡೆಗೆ ರಿಮೋಟ್ ಕಂಟ್ರೋಲ್ ನಿಯಂತ್ರಿತ ಸಾಧನದ ಮೂಲಕ ಹಾರಿ ಬಿಡಲಾಗುತ್ತದೆ.ನೆಲದಿಂದ ಸುಮಾರು ಒಂದರಿಂದ ಎರಡು ಮೀಟರ್ ಮೇಲಕ್ಕೆ ನೆಗೆದು ಹಾರುತ್ತಾ ಚಲಿಸುವ ಡ್ರೋಣ್ ನಲ್ಲಿ ವಿವಿಧ ರೀತಿಯ ಸಸ್ಯದ ಬೀಜಗಳನ್ನು ತುಂಬಿ ನಿಧಾನವಾಗಿ ನೆಲದ ಕಡೆಗೆ ಉದುರಿಸಲಾಗುತ್ತದೆ.ಬೀಜಗಳನ್ನು ರಸಗೊಬ್ಬರ ಮಣ್ಣು ಸೇಸಿದ ಮಿಶ್ರಣ ಮಾಡಿ ಬೀಜಕ್ಕೆ ಆವರಣವನ್ನು ರಚಿಸಿ ಉಂಡೆಗಳನ್ನಾಗಿ ಮಾಡಿ ಡ್ರೋಣ್‌ನ ಒಳಗೆ ತುಂಬಿಸಲಾಗುತ್ತದೆ.ಈ ಉಂಡೆಗಳ ಮೇಲೆ ಮಳೆ ನೀರು ಬಿದ್ದಾಗ ಬೀಜ ಬೇಗ ಮೊಳಕೆಯೊಡೆಯಲು ಸಹಕಾರಿ.ಇದರಿಂದ ಮನುಷ್ಯರು ಹೋಗಲು ಸಾಧ್ಯವಾಗದ ಕಡೆಗಳಲ್ಲಿ ಮುಖ್ಯವಾಗಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ನದಿ ತೀರದಲ್ಲಿ ಹಾಗೂ ಬಂಜರು ಭೂಮಿಯಲ್ಲಿ ಗಿಡ ಬೆಳೆಸುವ ಗುರಿ ಹೊಂದಲಾಗಿದೆ.ಬ್ಯಾಟರಿ ಚಾಲಿತ ಈ ಡ್ರೋಣನ್ನು ಮುಂದಿನ ಹಂತದಲ್ಲಿ ಸೋಲಾರ್ ಶಕ್ತಿಯ ಮೂಲಕ ಚಲಿಸುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ.ವಿದೇಶದಲ್ಲಿ ಈಗಾಗಲೆ ಈ ರೀತಿಯ ಪ್ರಯೋಗಗಳು ನಡೆದಿದೆ.ಆದರೆ ಭಾರತದಲ್ಲಿ ಈ ರೀತಿ ಡ್ರೋಣ್ ಮೂಲಕ ಪ್ರಥಮ ಬಾರಿಗೆ ಪ್ರಯೋಗ ನಡೆದಿದೆ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷ ಪ್ರೊ.ಶಿವಕುಮಾರ್ ಮಗದ ಡ್ರೋಣ್ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ಮಾತನಾಡುತ್ತಾ,ಪರಿಸರ ಸಂರಕ್ಷಣೆ ನಮ್ಮ ಮುಂದಿನ ಮಹತ್ವದ ಹೊಣೆಗಾರಿಕೆಯಾಗಿದೆ ಈ ನಿಟ್ಟಿನಲ್ಲಿ ಡ್ರೋಣ್ ಮೂಲಕ ಪರಿಸರ ಸಂರಕ್ಷಣೆಯ ಒಂದು ಪ್ರಯತ್ನ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಟಿ.ರವಿ ಮಾತನಾಡುತ್ತಾ,ರಾಜ್ಯದ ಪರಿಸರ ಸಚಿವರಾಗಿ ಕಾರ್ಯನಿರ್ವಹಿಸಿರುವ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಪರಿಸರ ಸಂರಕ್ಷಣೆಗಾಗಿ ನೆಡೆಯುತ್ತಿರುವ ಹೊಸ ಪ್ರಯೋಗಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.ಪ್ರಸಕ್ತ ಮನುಷ್ಯ ಮತ್ತು ವನ್ಯ ಜೀವಿಗಳ ನಡುವೆ ಪರಸ್ಪರ ಸಂಘರ್ಷ ನಡೆಯುತ್ತಿದೆ.ಜಾಗತಿಕ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ.ಇಂತಹ ಸನ್ನಿವೇಶದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಸಮಾರಂಭದಲ್ಲಿ ವಿಕಾಸ್ ಕಾಲೇಜಿನ ಸಲಹೆಗಾರರಾದ ಡಾ.ಅನಂತ ಪ್ರಭು ಜಿ,ಪ್ರಾಂಶುಪಾಲ ವೆಂಕಟ ರಾಯಡು,ಅಕಾಡೆಮಿಕ್ ಸಲಹೆಗಾರ ಪ್ರೊ.ಜಿನೋ ಕೆ.ಜಾನ್,ಡ್ರೀಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಜಾನ್ ನಿಖಿಲ್ ,ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ಸೂರಜ್,ಕೊರಗಪ್ಪ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News