ಸಜಿಪನಡು: ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು
ಬಂಟ್ವಾಳ, ಜೂ. 4: ಸ್ನಾನ ಮಾಡಲೆಂದು ನದಿಗಿಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮ್ರತಪಟ್ಟ ಘಟನೆ ಸಜಿಪನಡು ಗ್ರಾಮದ ಕಕ್ಕೆಬೆಟ್ಟು ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಭಟ್ಕಳ ಮೂಲದ ಶಿರ್ಶಿ ನಿವಾಸಿ ಅಬ್ದುಲ್ ರಝಾಕ್(38) ಮ್ರತಪಟ್ಟವರು. ಇವರು 7 ವರ್ಷಗಳ ಹಿಂದೆ ಸಜಿಪನಡು ಗ್ರಾಮದ ಇಬ್ರಾಹೀಂ ಎಂಬವರ ಪುತ್ರಿ ಝೈನಬಾ ಎಂಬವರನ್ನು ವಿವಾಹವಾಗಿದ್ದರು. ಆ ಬಳಿಕ ಅವರು ಸಜಿಪನಡುವಿನಲ್ಲೇ ವಾಸವಾಗಿದ್ದರು.
ಇಂದು ಸಂಜೆ 5 ಗಂಟೆಯ ಸುಮಾರಿಗೆ ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಆಳ ಅರಿವಾಗದೆ ಮುಳುಗಿದ್ದಾರೆ ಎನ್ನಲಾಗಿದ್ದು ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಸ್ಥಳೀಯರು ಧಾವಿಸಿ ಅವರ ರಕ್ಷಣೆಗಾಗಿ ಪ್ರಯತ್ನಿಸಿದ್ದರಾದರೂ ಪ್ರಯೋಜನವಾಗಿಲ್ಲ. ಬಳಿಕ ಗ್ರಾಮದ ಮುಳುಗುದಾರರಾದ ಆರೀಫ್, ಅಲ್ತಾಫ್, ಗ್ರಾಪಂ ಸದಸ್ಯ ರಶೀದ್, ಇಬ್ರಾಹೀಂ, ಅಬೂಬಕ್ಕರ್ ಕಡವು ಎಂಬವರು ನದಿಯಲ್ಲಿ ಶೋಧ ನಡೆಸಿ ಸುಮಾರು 8:30ರ ವೇಳೆಗೆ ಮ್ರತದೇಹವನ್ನು ನೀರಿನಿಂದ ಹೊರ ತೆಗೆದರು.
ಮ್ರತರಿಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು ಪತ್ನಿ ಝೈನಬಾ ಗರ್ಭಿಣಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕಗಕೆ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಗೌಡ ನೇತ್ರತ್ವದಲ್ಲಿ ಅವರ ಸಿಬ್ಬಂದಿ ಹಾಗೂ ಬಂಟ್ವಾಳ ಅಗ್ನಿ ಶಾಮಕ ದಳ ಕಾರ್ಯಾಚರಣೆ ನಡೆಸಿದರು. ಸಜಿಪನಡು ಜುಮಾ ಮಸೀದ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್, ಪ್ರ.ಕಾರ್ಯದರ್ಶಿ ಎಚ್.ಕೆ.ಮುಹಮ್ಮದ್, ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಹಕರಿಸಿದರು.