ಭಟ್ಕಳ: ರಾಜ್ಯದ ಪೊಲೀಸರು ಮುಷ್ಕರ ಕೈಗೊಳ್ಳುತ್ತಾರೆನ್ನುವ ಕಳೆದ ಕೆಲವು ದಿನಗಳ ವದಂತಿಗೆ ಕೊನೆಗೂ ತೆರೆ ಬಿದ್ದಿದೆ
ಭಟ್ಕಳ,ಜೂ 4: ರಾಜ್ಯದ ಪೊಲೀಸರು ಮುಷ್ಕರ ಕೈಗೊಳ್ಳುತ್ತಾರೆನ್ನುವ ಕಳೆದ ಕೆಲವು ದಿನಗಳ ವದಂತಿಗೆ ಕೊನೆಗೂ ತೆರೆ ಬಿದ್ದಿದೆ.
ಭಟ್ಕಳದಲ್ಲಿ ಭಟ್ಕಳ ನಗರ, ಭಟ್ಕಳ ಗ್ರಾಮೀಣ ಹಾಗೂ ಮುರ್ಡೇಶ್ವರದ ಪೊಲೀಸ್ ಠಾಣೆಗಳ ಸಿಬ್ಬಂದಿಗಳು ಸಾಮೂಹಿಕ ರಜಾ ಅರ್ಜಿಗಳನ್ನು ಆಯಾಯ ಠಾಣೆಯ ಮುಖ್ಯಸ್ಥರಿಗೆ ಸಲ್ಲಿಸಿದ್ದರು ಸಹ ನಂತರ ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ವಾಪಾಸು ಪಡೆದಿದ್ದರು. ಅರ್ಜಿಗಳನ್ನು ವಾಪಾಸು ಪಡೆದಿದ್ದರೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮುಷ್ಕರದ ಕುರಿತು ಗೊಂದಲ ಮುಂದು ವರಿದಿದ್ದು ಒಂದು ವೇಳೆ ಪೊಲಿಸರು ಮುಷ್ಕರಕ್ಕೆ ಮುಂದಾದರೆ ಮುಂಜಾಗೃತಾ ಕ್ರಮವಾಗಿ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳೂ ಕೂಡಾಪೊಲೀಸರೊಂದಿಗೆ ಕಂಡು ಬಂದರು.
ಭಟ್ಕಳ ಸೂಕ್ಷ್ಮ ಪ್ರದೇಶ ಎನ್ನುವ ಕುಖ್ಯಾತಿ ಪಡೆದಿರುವುದರಿಂದ ಭಟ್ಕಳ ತಾಲೂಕಿನಲ್ಲಿ ಪೊಲೀಸರು ಮುಷ್ಕರಕ್ಕೆ ಮುಂದಾದಲ್ಲಿ ಸಿಬ್ಬಂದಿಗಳ ಕೊರತೆ ಉಂಟಾಗ ಬಾರದು ಎನ್ನುವ ಉದ್ದೇಶದಿಂದ ಒಂದು ಬಿ.ಎಸ್.ಎಫ್. ತುಕಡಿಯನ್ನು ಕೂಡಾ ಭಟ್ಕಳಕ್ಕೆ ನಿಯೋಜಿಸಿದ್ದು ಬೆಳಗ್ಗೆಯೇ ಬಂದು ಹಾಜರಾಗಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಬಿ.ಎಸ್.ಎಫ್. ತುಕಡಿಯನ್ನು ಕರೆಯಿಸಿಕೊಂಡಿರುವುದು ಸರಕಾರಕ್ಕೂ ಪೊಲೀಸರ ಮುಷ್ಕರದ ವದಂತಿ ತಲೆನೋವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಯಿತು.
ಜಿಲ್ಲೆಯಲ್ಲಿ ಯಾರೂ ಮುಷ್ಕರದಲ್ಲಿ ಭಾಗವಹಿಸಿಲ್ಲ ಎಸ್.ಪಿ: ಭಟ್ಕಳಕ್ಕೆ ಭೇಟಿ ನೀಡಿದ್ದ ಉತ್ತರ ಕನ್ನಡ ಜಿಲ್ಲಾ ಎಸ್. ಪಿ. ವಂಶಿಕೃಷ್ಣ ಅವರು ಸುದ್ದಿಗಾರರ ಪ್ರಶ್ನೆಗುತ್ತರಿಸುತ್ತಾ, ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾರೂ ಕೂಡಾ ಮುಷ್ಕರದಲ್ಲಿ ಭಾಗವಹಿಸಿಲ್ಲ. ಯಾವುದೇ ಸಿಬ್ಬಂದಿಯೂ ಕೂಡಾ ರಜೆಯ ಮೇಲೆತೆರಳಿಲ್ಲ ಎಂದು ಸ್ಪಷ್ಟಪಡಿಸಿದರು.