ಪಾಕಿಸ್ತಾನದೊಂದಿಗೆ ಅವಕಾಶದ ಕಿಂಡಿ ಮುಚ್ಚುತ್ತಿದೆ: ಪಾರಿಕ್ಕರ್
ಹೊಸದಿಲ್ಲಿ, ಜೂ.4: ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದೊಂದಿಗೆ ಸೌಹಾರ್ದ ಹಾಗೂ ಮಾತುಕತೆಯ ಕಿಟಕಿಯನ್ನು ತೆರೆದಿದ್ದರು. ಆದರೆ, ಭಯೋತ್ಪಾದನೆಯನ್ನು ನಿಗ್ರಹಿಸುವ ಪಾಕಿಸ್ತಾನದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಉಳಿದುದರಿಂದ ಅದೀಗ ಮುಚ್ಚುತ್ತಿದೆಯೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಹೇಳಿದ್ದಾರೆ.
ಪ್ರಧಾನಿ ಮೋದಿ, ಪಾಕಿಸ್ತಾನದ ಪ್ರಧಾನಿ ಯನ್ನು ಭೇಟಿಯಾಗಿದ್ದ ವೇಳೆ ಅವಕಾಶದ ಕಿಂಡಿಯನ್ನು ತೆರೆದಿದ್ದರು. ಅದೀಗ ನಿಧಾನವಾಗಿ ಮುಚ್ಚು ತ್ತಿದೆಯೆಂಬುದು ತನ್ನ ಭಾವನೆಯಾಗಿದೆ. ಕಿಂಡಿ ಮುಚ್ಚಿ ಕೊಳ್ಳುವ ಮೊದಲು, ಪಾಕಿಸ್ತಾನವು ಭಯೋತ್ಪಾದನೆ ನಿಗ್ರಹದ ಕುರಿತಾದ ತನ್ನ ಪ್ರಾಮಾಣಿಕತೆಯ ಬಗ್ಗೆ ಭಾರತಕ್ಕೆ ವಿಶ್ವಾಸವನ್ನು ಮೂಡಿಸುವ ಅಗತ್ಯವಿದೆಯೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನವು ಭಯೋತ್ಪಾದಕರನ್ನು ಒಳ್ಳೆಯವರು ಹಾಗೂ ಕೆಟ್ಟವರೆಂದು ವಿಭಾಗಿಸುತ್ತದೆ. ಅದು ಕೆಟ್ಟ ಭಯೋತ್ಪಾದಕರ ಬೆನ್ನಿಗೆ ಬಿದ್ದಿದೆ. ಒಳ್ಳೆಯ ಭಯೋತ್ಪಾದಕರಿಗೆ ಅಫ್ಘಾನಿಸ್ತಾನ ಹಾಗೂ ಭಾರತದಲ್ಲಿ ಕಾರ್ಯಾಚರಿಸಲು ಉತ್ತೇಜನ ನೀಡುತ್ತಿದೆ. ಅದನ್ನು ರಾಜತಾಂತ್ರಿಕ ನೆಲೆಯಲ್ಲೇ ನಿಭಾಯಿಸಬೇಕೆಂಬುದು ತನ್ನ ಭಾವನೆಯಾಗಿದೆಯೆಂದು ಪಾರಿಕ್ಕರ್ ತಿಳಿಸಿದ್ದಾರೆ.
ಸಿಂಗಾಪುರದಲ್ಲಿ ನಡೆದ, ಅಂತಃಸರಕಾರಗಳ ಭದ್ರತಾ ವೇದಿಕೆಯಾಗಿರುವ ಶಾಂಗ್ರಿ-ಲಾ ಮಾತುಕತೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿಯ ಹೃದಯ ಶಸ್ತ್ರ ಚಿಕಿತ್ಸೆಯ ಮುನ್ನ ಪ್ರಧಾನಿ ಮೋದಿ, ನವಾಝ್ ಶರೀಫ್‌ರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಅದರ ಹೊರತಾಗಿಯೂ, ಜನವರಿಯಲ್ಲಿ ನಡೆದ ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ತನಿಖೆಯ ಸಂಬಂಧ, ಇತ್ತೀಚಿನ ವಾರಗಳಲ್ಲಿ ಭಾರತ-ಪಾಕಿಸ್ತಾನಗಳ ನಡುವಿನ ಸಂಬಂಧ ಹಳಸಿದೆ.
ಪಂಜಾಬ್‌ನ ಬಿಗು ಭದ್ರತೆಯ ವಾಯು ನೆಲೆಗೆ ಪಾಕಿಸ್ತಾನದ ತನಿಖೆದಾರರ ತಂಡವೊಂದರ ಭೇಟಿಯ ಬಳಿಕ, ಪಾಕಿಸ್ತಾನಕ್ಕೆ ಎನ್‌ಐವಿಯ ತಂಡದ ಭೇಟಿಯ ಕುರಿತು ಭಾರತದ ಮನವಿಗೆ ಅದು ಇನ್ನೂ ಪ್ರತಿಕ್ರಿಯಿಸಿಲ್ಲ.
ಪಠಾಣ್‌ಕೋಟ್ ವಾಯು ನೆಲೆಗೆ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿಯರ ಪಾತ್ರವು ‘ಅಂಗೀಕೃತ ಸಂಗತಿಯಾಗಿದೆ’ ಎಂದು ವಿದೇಶಾಂಗ ಸಚಿವಾಲಯ ನಿನ್ನೆ ಹೇಳಿತ್ತು. ಇದೇ ವೇಳೆ, ಭಯೋತ್ಪಾದಕರಿಗೆ ಸಹಕಾರ ನೀಡುವಲ್ಲಿ ಪಾಕಿಸ್ತಾನದ ಪಾತ್ರವಿಲ್ಲವೆಂದು ತಾನು ಹೇಳಿದ್ದೇನೆಂಬ ವರದಿಯನ್ನು ಎನ್‌ಐಎ ತಳ್ಳಿ ಹಾಕಿದೆ.