ವಿಕಾಸ್ ಕಾಲೇಜಿನಲ್ಲಿ ಡ್ರೋಣ್ ಮೂಲಕ ಬೀಜ ಬಿತ್ತನೆ
ಮಂಗಳೂರು, ಜೂ.4: ದೇಶದಲ್ಲಿ ಪ್ರಥಮ ಬಾರಿಗೆ ಡ್ರೋಣ್ ಮೂಲಕ ಬೀಜ ಬಿತ್ತನೆ ಕಾರ್ಯಕ್ರಮವನ್ನು ಇಲ್ಲಿನ ವಿಕಾಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಯಿತು.
ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಚಿಕ್ಕ ಮಗಳೂರಿನ ಶಾಸಕ ಸಿ.ಟಿ.ರವಿ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ಡ್ರೋಣ್ ಮೂಲಕ ಬೀಜ ಬಿತ್ತನೆ ಮಾಡುವ ಪ್ರಾತ್ಯಕ್ಷತೆಗೆ ಚಾಲನೆ ನೀಡಿದರು.
ನಗರದ ವಿಕಾಸ್ ಕಾಲೇಜು ಹಾಗೂ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಈ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು.
ಡ್ರೋಣ್ ಮೂಲಕ ಬೀಜ ಬಿತ್ತನೆ
3ಡಿ ಏರಿಯಲ್ ಸರ್ವೆ ಹೊಂದಿರುವ ಡ್ರೋಣನ್ನು ಬೀಜ ಬಿತ್ತನೆ ಮಾಡಬೇಕಾದ ಸ್ಥಳಕ್ಕೆ ರಿಮೋಟ್ ಕಂಟ್ರೋಲ್ ನಿಯಂತ್ರಿತ ಸಾಧನದ ಮೂಲಕ ಹಾರಿ ಬಿಡಲಾಗುತ್ತದೆ. ನೆಲದಿಂದ ಒಂದರಿಂದ ಎರಡು ಮೀಟರ್ ಮೇಲಕ್ಕೆ ನೆಗೆದು ಹಾರುತ್ತಾ ಚಲಿಸುವ ಡ್ರೋಣ್‌ನಲ್ಲಿ ವಿವಿಧ ರೀತಿಯ ಸಸ್ಯದ ಬೀಜಗಳನ್ನು ತುಂಬಿ ನಿಧಾನವಾಗಿ ನೆಲದ ಕಡೆಗೆ ಉದುರಿಸಲಾಗುತ್ತದೆ. ವಿದೇಶದಲ್ಲಿ ಈಗಾಗಲೇ ಈ ರೀತಿಯ ಪ್ರಯೋಗಗಳು ನಡೆದಿದ್ದು, ಭಾರತದಲ್ಲಿ ಡ್ರೋಣ್ ಮೂಲಕ ಪ್ರಥಮ ಬಾರಿಗೆ ಪ್ರಯೋಗ ನಡೆದಿದೆ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷ ಪ್ರೊ.ಶಿವಕುಮಾರ್ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ಮಾತನಾಡಿ, ಡ್ರೋಣ್ ಮೂಲಕ ಪರಿಸರ ಸಂರಕ್ಷಣೆಯ ಒಂದು ಪ್ರಯತ್ನ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಟಿ.ರವಿ ಮಾತನಾಡಿ, ರಾಜ್ಯದ ಪರಿಸರ ಸಚಿವರಾಗಿ ಕಾರ್ಯನಿರ್ವಹಿಸಿರುವ ಕೃಷ್ಣ ಜೆ.ಪಾಲೆಮಾರ್ ಪರಿಸರ ಸಂರಕ್ಷಣೆಗಾಗಿ ಹೊಸ ಪ್ರಯೋಗಗಳಿಗೆ ಪ್ರೋತ್ಸಾಹ ನೀಡು ತ್ತಿರುವುದು ಶ್ಲಾಘನೀಯ. ಪ್ರಸಕ್ತ ಮನುಷ್ಯ ಮತ್ತು ವನ್ಯ ಜೀವಿಗಳ ನಡುವೆ ಪರಸ್ಪರ ಸಂಘರ್ಷ ನಡೆಯು ತ್ತಿದ್ದು, ಜಾಗತಿಕ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ.ಇಂತಹ ಸನ್ನಿವೇಶದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಸಮಾರಂಭದಲ್ಲಿ ವಿಕಾಸ್ ಕಾಲೇಜಿನ ಸಲಹೆಗಾರರಾದ ಡಾ.ಅನಂತ ಪ್ರಭು ಜಿ., ಪ್ರಾಂಶುಪಾಲ ವೆಂಕಟ ರಾಯಡು, ಅಕಾಡಮಿಕ್ ಸಲಹೆಗಾರ ಪ್ರೊ.ಜಿನೋ ಕೆ.ಜಾನ್, ಡ್ರೀಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಜಾನ್ ನಿಖಿಲ್, ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ಸೂರಜ್, ಕೊರಗಪ್ಪ ಮೊದಲಾದವರು ಉಪಸ್ಥಿತರಿದ್ದರು.
ರಸಗೊಬ್ಬರ, ಮಣ್ಣು ಸೇರಿಸಿದ ಮಿಶ್ರಣ ಮಾಡಿ ಬೀಜಗಳಿಗೆ ಆವರಣವನ್ನು ರಚಿಸಿ ಉಂಡೆಗಳನ್ನಾಗಿ ಮಾಡಿ ಡ್ರೋಣ್‌ನ ಒಳಗೆ ತುಂಬಿಸಲಾಗುತ್ತದೆ. ಈ ಉಂಡೆಗಳ ಮೇಲೆ ಮಳೆ ನೀರು ಬಿದ್ದಾಗ ಬೀಜ ಮೊಳಕೆಯೊಡೆಯುತ್ತದೆ. ಬ್ಯಾಟರಿ ಚಾಲಿತ ಈ ಡ್ರೋಣನ್ನು ಮುಂದಿನ ಹಂತದಲ್ಲಿ ಸೋಲಾರ್ ಶಕ್ತಿಯ ಮೂಲಕ ಚಲಿಸುವಂತೆ ಮಾಡುವ ಪ್ರಯತ್ನ ನಡೆಯುತ್ತಿದ್ದು, ಮನುಷ್ಯರು ತಲುಪಲು ಸಾಧ್ಯವಾಗದ ಕಡೆಗಳಿಗೆ, ಮುಖ್ಯವಾಗಿ ಪಶ್ಚಿಮ ಘಟ್ಟದ ಪ್ರದೇಶದ ನದಿ ತೀರದಲ್ಲಿ ಹಾಗೂ ಬಂಜರು ಭೂಮಿಯಲ್ಲಿ ಗಿಡ ಬೆಳೆಸುವ ಗುರಿ ಹೊಂದಲಾಗಿದೆ.
-ಪ್ರೊ.ಶಿವಕುಮಾರ್