ಅಮ್ಚಿನಡ್ಕ: ಕಾರಿಗೆ ಬಸ್ಸು ಢಿಕ್ಕಿ; ಪಾದಚಾರಿ ದುರ್ಮರಣ
ಪುತ್ತೂರು, ಜೂ. 5: ಕೆಸ್ಸಾರ್ಟಿಸಿ ಬಸ್ ಮತ್ತು ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿದ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಪಾದಚಾರಿಯೋರ್ವರ ಮೇಲೆ ಹರಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಾವು ಸಮೀಪದ ಅಮ್ಚಿನಡ್ಕ ಎಂಬಲ್ಲಿ ರವಿವಾರ ಮದ್ಯಾಹ್ನ ನಡೆದಿದೆ.
ಅಮ್ಚಿನಡ್ಕ ನಿವಾಸಿ ಮೂಸಾ(65) ಮೃತಪಟ್ಟ ವ್ಯಕ್ತಿ. ಕಾರು ಮತ್ತು ಬಸ್ಸು ನಡುವೆ ಡಿಕ್ಕಿ ಸಂಭವಿಸಿದಾಗ ಬಸ್ಸು ಚಾಲಕನ ನಿಯಂತ್ರಣ ತಪ್ಪಿರಸ್ತೆ ಬದಿಗೆ ಸಂಚರಿಸಿತ್ತು. ಈ ಸಂದರ್ಭ ಅಲ್ಲೇ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂಸಾ ಅವರ ಮೇಲೆಯೇ ಬಸ್ಸು ಹರಿದಿದೆ. ಪರಿಣಾಮ ಮೂಸಾ ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನ ನಡೆಸಲಾಯಿತಾದರೂ ಅವರು ಮೃತಪಟ್ಟಿದ್ದರು.
ನಾಟಿ ವೈದ್ಯರಾಗಿದ್ದ ಮೃತರು ತನ್ನ ಮನೆಯಿಂದ ಕುಟುಂಬದ ಮೂಲ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂವಿಸಿದೆ. ಘಟನೆಯಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರು ಚಾಲಕನಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಈಶ್ವರಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.