ಆಲಂಕಾರು: ಶಿಥಿಲಗೊಂಡ ಕಟ್ಟಡ ತೆರವಿಗೆ ಗ್ರಾಮಸ್ಥರಿಂದ ಮನವಿ
ಕಡಬ, ಜೂ.5. ಆಲಂಕಾರು ಪೇಟೆಯ ಹೃದಯ ಬಾಗದಲ್ಲಿರುವ ಶಿಥಿಲಾವಸ್ಥೆಯ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಆಲಂಕಾರು ಗ್ರಾಮ ಪಂಚಾಯತ್‌ಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತಕ್ಕೊಳಪಟ್ಟ ಈ ಕಟ್ಟಡವು ಕಳೆದ ಕೆಲವು ವರ್ಷಗಳಿಂದ ದುರಸ್ತಿ ಕಾಣದೆ ಕುಸಿಯುವ ಹಂತವನ್ನು ತಲುಪಿದೆ. ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದ್ದು ಕಟ್ಟಡದ ಮಣ್ಣಿನ ಗೋಡೆಗೆ ಮಳೆನೀರು ನೀರು ಬಿದ್ದು ಕುಸಿತದ ಹಂತಕ್ಕೆ ತಲುಪಿದೆ. ಆಲಂಕಾರು ಪೇಟೆಯ ಮಧ್ಯದಲ್ಲಿ ಈ ಕಟ್ಟಡ ಇರುವುದರಿಂದ ಕಟ್ಟಡದ ಪಕ್ಕದಲ್ಲಿಯೇ ಇರುವ ಸಂಪರ್ಕ ದಾರಿಯನ್ನು ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಸಂಚಾರಕ್ಕೆ ಉಪಯೋಗಿಸುತ್ತಿದ್ದಾರೆ.
ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡವನ್ನು ಅಪಾಯ ಸಂವಿಸುವ ಮುನ್ನಾ ತೆರವುಗೊಳಿಸಬೇಕು ಅಥವಾ ಕಟ್ಟಡವನ್ನು ದುರಸ್ತಿಗೊಳಿಸಬೇಕೆಂದು ಲಿಖಿತ ದೂರನ್ನು ನೀಡುವುದರ ಮೂಲಕ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಪಾಯಕಾರಿ ಕಟ್ಟಡದ ಬಗ್ಗೆ ಸಾರ್ವಜನಿಕ ದೂರುಗಳು ಬಂದಿದೆ. ಕಟ್ಟಡ ದೇವಾಲಯದ ಅಧೀನಕ್ಕೆ ಒಳಪಟ್ಟ ಜಾಗದಲ್ಲಿದೆ. ಆದ್ದರಿಂದ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ದೇವಾಲಯದ ಆಡಳಿತಾಧಿಕಾರಿ ಕಡಬ ತಹಶೀಲ್ದಾರರಿಗೆ ಕ್ರಮ ಕೈಗೊಳ್ಳುವಂತೆ ಪಂಚಾಯತ್‌ನಿಂದ ಪತ್ರ ಬರೆಯಲಾಗಿದೆ.
ಜಗನ್ನಾಥ ಶೆಟ್ಟಿ, ಆಲಂಕಾರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ
ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ದುರಸ್ತಿ ಮಾಡುವ ಚಿಂತನೆಯಿಲ್ಲ. ದೇವಾಲಯದ ಅಧೀನಕ್ಕೆ ಒಳಪಟ್ಟ ಕಟ್ಟಡವಾಗಿರುವುದರಿಂದ ದೇವಾಲಯದಲ್ಲಿ ಕಟ್ಟಡ ದುರಸ್ತಿ ಮಾಡುವಷ್ಟು ಅನುದಾನವು ಇಲ್ಲವಾಗಿದೆ. ಕಟ್ಟಡ ಪರಿಶೀಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು.
ಬಿ.ಲಿಂಗಯ್ಯ, ಕಡಬ ವಿಶೇಷ ತಹಶೀಲ್ದಾರರು.