×
Ad

ಈ ಗ್ರಾಮದಲ್ಲಿ ಸಣ್ಣ ಕೃಷಿ ಉಪಕರಣಗಳೂ ಬಾಡಿಗೆಗೆ ಲಭ್ಯ!

Update: 2016-06-05 18:38 IST

ಮಂಗಳೂರು, ಜೂ.5: ಸಾವಿರಾರು ಎಕರೆಯ ಉಳುಮೆ, ಕೃಷಿ ಚಟುವಟಿಕೆಗಳಿಗೆ ಕೃಷಿ ಯಂತ್ರಗಳು ಸಲಕರಣೆಗಳು ಬಾಡಿಗೆಗೆ ನೀಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಸಣ್ಣ ರೈತರಿಗೆ ವರ್ಷದಲ್ಲಿ ಕೆಲ ದಿನಗಳು ಮಾತ್ರ ಅಗತ್ಯವಿರುವ ಬುಟ್ಟಿ, ಹಾರೆ, ಪಿಕ್ಕಾಸುಗಳನ್ನು ಬಾಡಿಗೆ ನೀಡುವುದನ್ನು ಕೇಳಿದ್ದೀರಾ? ನೋಡಿದ್ದೀರಾ?

ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಇಂತಹ ಒಂದು ಸಣ್ಣ ರೈತ ಸ್ನೇಹಿ ಸೌಲಭ್ಯವನ್ನು ಇಲ್ಲಿನ ಸೇವಾ ಸಹಕಾರಿ ಸಂಘಗಳ ನಾಲ್ಕು ಶಾಖೆಗಳ ಮೂಲಕ ಒದಗಿಸಲಾಗುತ್ತಿದೆ. ಸೆಂಟ್ಸ್‌ಗಟ್ಟಲೆ ಜಾಗಗಳಲ್ಲಿ ಕೃಷಿ ಮಾಡುವ ರೈತರಿಗೆ ಅನುಕೂಲವಾಗುವಂತೆ ಇಡ್ಕಿದು ಸೇವಾ ಸಹಕಾರಿ ಸಂಘಗಳ ಮೂಲಕ ರೈತರಿಗೆ ದಿನಕ್ಕೆ ತಲಾ 10 ರೂ. ದರದಲ್ಲಿ ಹಾರೆ, ಪಿಕ್ಕಾಸು, ಬುಟ್ಟಿಗಳನ್ನು ನೀಡಲಾಗುತ್ತದೆ. ಗ್ರಾಮದ ರೈತರು ಸೇವಾ ಸಹಕಾರಿ ಸಂಘದ ಕಚೇರಿಗಳಿಗೆ ಭೇಟಿ ನೀಡಿ ಈ ಸೌಲಭ್ಯವನ್ನು ಪಡೆಯಬಹುದು. ಅದಕ್ಕಾಗಿ ರೈತ ಸಂಘದ ಸದಸ್ಯನಾಗಿರಬೇಕೆಂಬ ನಿಯವೇನೂ ಇಲ್ಲ. ಸಂಘದ ಕಚೇರಿ ಪುಸ್ತಕದಲ್ಲಿ ಹೆಸರು ಬರೆಯಿಸಿಕೊಂಡು ಸಲಕರಣೆಗಳನ್ನು ಪಡೆದುಕೊಳ್ಳಬಹುದು. ಕಳೆದ ಒಂದೂವರೆ ವರ್ಷಗಳಿಂದ ಈ ಸೌಲಭ್ಯ ಗ್ರಾಮದ ಸಣ್ಣ ರೈತರಿಗೆ ಲಭ್ಯವಾಗುತ್ತಿದೆ.

ಕೈಗಾಡಿಗಳೂ ಬಾಡಿಗೆಗಿವೆ

ಇಲ್ಲಿ ಸಣ್ಣ ಪುಟ್ಟ ಕೃಷಿ ಸಲಕರಣೆಗಳ ಜತೆ ಕೈಗಾಡಿಗಳನ್ನು ಕೂಡಾ ದಿವೊಂದಕ್ಕೆ 40 ರೂ. ಬಾಡಿಗೆಯಲ್ಲಿ ಸಣ್ಣ ರೈತ ತನಗೆ ಅಗತ್ಯವಿರುವ ದಿನಗಳಲ್ಲಿ ಪಡೆದು ಉಪಯೋಗಿಸಬಹುದಾಗಿದೆ. ಕುಳ, ಇಡ್ಕಿದು, ಸೂರ್ಯ ಹಾಗೂ ಮಿತ್ತೂರು ಸೇವಾ ಸಹಕಾರಿ ಸಂಘಗಳ ಮೂಲಕ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

‘‘ದೊಡ್ಡ ರೈತರು ತಮಗೆ ವರ್ಷವಿಡೀ ಅಗತ್ಯವಿರುವ ಕೃಷಿ ಸಲಕರಣೆಗಳನ್ನು ಖರೀದಿಸಿ ತಮ್ಮಲ್ಲಿ ಇಟ್ಟುಕೊಳ್ಳುವಷ್ಟು ಸಮರ್ಥಗಿರುತ್ತಾರೆ. ಆದರೆ ಸಣ್ಣ ರೈತರು ತಮ್ಮ ಗದ್ದೆ, ತೋಟ ಅಥವಾ ಕೈತೋಟಗಳಲ್ಲಿ ಕೆಲ ದಿನಗಳ ಕೆಲಸಕ್ಕಾಗಿ ಸಾವಿರಾರು ರೂ. ಬೆಲೆ ಬಾಳುವ ಈ ಸಣ್ಣ ಪುಟ್ಟ ಸಲಕರಣೆಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡು ಇಡ್ಕಿದು ಸೇವಾ ಸಹಕಾರಿ ಸಂಘವು ಈ ಕ್ರಮಕ್ಕೆ ಮುಂದಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಈ ಸೌಲಭ್ಯವನ್ನು ರೈತರಿಗೆ ಸಂಘದ ನಾಲ್ಕು ಶಾಖೆಗಳ ಮೂಲಕ ಒದಗಿಸಲಾಗುತ್ತಿದೆ. ದಿನವೊಂದಕ್ಕೆ 10ರಿಂದ 15ರಷ್ಟು ಸಣ್ಣ ರೈತರು ಇದರ ಉಪಯೋಗ ಪಡೆಯುತ್ತಿದ್ದಾರೆ’’ ಎನ್ನುತ್ತಾರೆ ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಬಿ. ಗೋಪಾಲಕೃಷ್ಣ ಭಟ್.

‘‘ಸುಮಾರು 25,000 ರೂ. ವೌಲ್ಯದ ಸಣ್ಣ ಕೃಷಿ ಸಲಕರಣೆಗಳನ್ನು ಸಂಘವು ಖರೀದಿಸಿ, ಬಾಡಿಗೆ ನೀಡುವುದನ್ನು ಆರಂಭಿಸಿ ಕಳೆದ ಒಂದೂವರೆ ವರ್ಷದಲ್ಲಿ 60,000 ರೂ.ಗಳನ್ನು ಬಾಡಿಗೆಯಿಂದಲೇ ಆದಾಯ ಗಳಿಸಿದೆ. ರೈತರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಗೆ ಬೇಕಾದ ದಿನಗಳಲ್ಲಿ ಸಣ್ಣ ರೈತರು ಈ ಸಲಕರಣೆಗಳನ್ನು ಬಾಡಿಗೆಗೆ ಪಡೆದು ಉಪಯೋಗಿಸಿ ಹಿಂತಿರುಗಿಸುತ್ತಾರೆ’’ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News