ರಾಯಿ: ಖಾಸಗಿ ಕೊಳವೆ ಬಾವಿಗೆ ಗ್ರಾಮಸ್ಥರಿಂದ ತಡೆ
ಬಂಟ್ವಾಳ, ಜೂ. 5: ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾರ್ಜಾರ್ ಎಂಬಲ್ಲಿ ಹಲವಾರು ಮನೆಗಳಿಗೆ ಎರಡು ವರ್ಷಗಳಿಂದ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿ ಬಳಿ ಖಾಸಗಿ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ದಿಢೀರ್ ಕೊಳವೆ ಬಾವಿ ಕೊರೆಯಲು ಮುಂದಾದ ವೇಳೆ ಸ್ಥಳೀಯ ನಾಗರಿಕರು ತಡೆದ ಘಟನೆ ನಡೆದಿದೆ.
ಬಾರ್ಜಾರ್‌ನಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗೆ ಖರೀದಿಸಿದ್ದಾರೆನ್ನಲಾದ 20 ಸೆಂಟ್ಸ್ ಜಮೀನಿನಲ್ಲಿ ಶನಿವಾರ ರಾತ್ರಿ ಏಕಾಏಕಿ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದರು. ಕೊಳವೆ ಬಾವಿ ಕೊರೆಯುವ ಸುದ್ದಿ ಸ್ಥಳೀಯರಿಗೆ ತಿಳಿಯುತ್ತಿದ್ದಂತೆಯೇ ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಮತ್ತಿತರರಿಗೆ ಸ್ಥಳೀಯರು ದೂರು ನೀಡಿದ್ದಾರೆ. ಇದೇ ವೇಳೆ ಸ್ಥಳೀಯ ಕುದ್ಲೋಳಿ, ರಾಯಿ, ಕೈತ್ರೋಡಿ ಮತ್ತಿತರ ಕಡೆಯಿಂದ ಅಪಾರ ಮಂದಿ ನಾಗರಿಕರು ಜಮಾಯಿಸಿ ಕೊಳವೆ ಬಾವಿ ಕೊರೆಯುವ ಕಾಮಗಾರಿಯನ್ನು ಸ್ಥಗಿತಗೊಳಿಸಿದರು.
ಈ ಕೊಳವೆ ಬಾವಿ ಕೊರೆಯಲು ಪಂಚಾಯತ್‌ನಿಂದ ಅನುಮತಿ ಪಡೆದಿರಲಿಲ್ಲ. ಇತ್ತೀಚೆಗಷ್ಟೇ ರಾಯಿ ಸಮೀಪದ ದೈಲ ಎಂಬಲ್ಲಿ ವ್ಯಕ್ತಿಯೊಬ್ಬರು ಕೊಳವೆ ಬಾವಿ ಕೊರೆಯಲು ಮುಂದಾದ ವೇಳೆ ಇಲ್ಲಿನ ಪಂಚಾಯತ್ ಪಿಡಿಒ ವೆಂಕಟೇಶ್ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ತಹಶೀಲ್ದಾರ್ ಪುರಂದರ ಹೆಗ್ಡೆರನ್ನು ಕರೆಸಿ ಕೊಳವೆ ಬಾವಿ ಕೊರೆಯಲು ಬಂದಿದ್ದ ಲಾರಿ ಮತ್ತಿತರ ಸಾಮಗ್ರಿ ವಶಪಡಿಸಿಕೊಂಡಿದ್ದರು.
ಈ ನಡುವೆ ರಾತ್ರಿ ಸುಮಾರು 11ಗಂಟೆಗೆ ಬಂಟ್ವಾಳ-ಮೂಡುಬಿದಿರೆ ರಸ್ತೆ ನಡುವಿನ ಬಾರ್ಜಾರ್ ಎಂಬಲ್ಲಿ ಅಪಾರ ಮಂದಿ ಜಮಾಯಿಸುತ್ತಿರುವ ಸುದ್ದಿ ತಿಳಿದು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಗುಂಪನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.