×
Ad

ವಿಕಾಸ್ ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಮಾಹಿತಿ-ಮಾರ್ಗದರ್ಶನ ಶಿಬಿರ

Update: 2016-06-05 20:06 IST

ಮಂಗಳೂರು,ಜೂ.5: ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಉತ್ತಮ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಮುಂದೆ ಬರಲು ಸಾಧ್ಯ. ಅದಕ್ಕಾಗಿ ಅನಗತ್ಯವಾದ ಒತ್ತಡವನ್ನು ಸೃಷ್ಟಿಸಿಕೊಳ್ಳಬಾರದು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜಿ.ಟಿ.ರಾಧಾಕೃಷ್ಣ ತಿಳಿಸಿದ್ದಾರೆ.

ಅವರು ಇಂದು ನಗರದ ವಿಕಾಸ ಪದವಿ ಪೂರ್ವ ಕಾಲೇಜಿನ ವತಿಯಿಂದ ವೌಂಟ್ ಕಾರ್ಮೆಲ್ ಸಭಾಂಗಣದಲ್ಲಿ 2016-18ನೆ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ವಿಕಾಸ್ ಶಿಕ್ಷಣ ಸಂಸ್ಥೆ ಅಲ್ಪ ಕಾಲಾವಧಿಯಲ್ಲಿ ಮಹತ್ವದ ಸಾಧನೆ ಮಾಡಿದೆ. ವಿದ್ಯಾರ್ಥಿಗಳು ಸೂಕ್ತ ಗುರಿ ಸಾಧಿಸಲು ಶಿಕ್ಷಕರ ಸೂಕ್ತ ಮಾರ್ಗದರ್ಶನದ ಜೊತೆ ಪೋಷಕರ ನೈತಿಕ ಬೆಂಬಲ ಅಗತ್ಯವಿದೆ ಎಂದು ಜಿ.ಟಿ.ರಾಧಾಕೃಷ್ಣ ತಿಳಿಸಿದರು.

ಉತ್ತಮ ಪ್ರಜೆಗಳಾಗುವುದು ಮುಖ್ಯ ಗುರಿ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ, ವೃತ್ತಿ ಕೌಶಲ್ಯಗಳನ್ನು, ಜ್ಞಾನ ಸಂಪತ್ತನ್ನು ಪಡೆದುಕೊಂಡು ದೇಶದ ಉತ್ತಮ ಪ್ರಜೆಗಳಾಗುವುದು ಶಿಕ್ಷಣದ ಮೂಲ ಗುರಿಯಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಶಾಂತಾರಾಮ ಶೆಟ್ಟಿ ತಿಳಿಸಿದರು.

ವಿದ್ಯಾರ್ಥಿಗಳು ಪುಸ್ತಕದ ಹುಳುಗಳಂತಾಗದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಂತಿಮವಾಗಿ ಸಮಾಜದಲ್ಲಿ ಉತ್ತಮ ಮಾನವೀಯ ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು.ಇಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವುದು ಶಿಕ್ಷಣ ಸಂಸ್ಥೆಗಳ ಪ್ರಮುಖ ಗುರಿಯಾಗಿದೆ ಎಂದು ಡಾ.ಶಾಂತರಾಮಶೆಟ್ಟಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಜೆ.ಪಾಲೆಮಾರ್ ಮಾತನಾಡಿ, ವಿಕಾಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ವೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಅಲ್ಪಕಾಲಾವಧಿಯಲ್ಲಿ ಉತ್ತಮ ಪ್ರಗತಿ ಸಾಧಿಸಲು ಕಾರಣರಾದ ಎಲ್ಲರನ್ನು ಅಭಿನಂದಿಸುವುದಾಗಿ ತಿಳಿಸಿದರು. ವಿಕಾಸ ಕಾಲೇಜಿನಲ್ಲಿ ವಿಶ್ವಾಸವಿರಿಸಿ ವಿದ್ಯಾರ್ಥಿಗಳನ್ನು ಸೇರಿಸುವ ಪೋಷಕರ ನಂಬಿಕೆ ಚ್ಯುತಿ ಬಾರದಂತೆ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯದೊಂದಿಗೆ ರಾಜ್ಯಕ್ಕೆ ಮಾದರಿಯಾಗುವ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳಿಸುವ ಉದ್ದೇಶ ಹೊಂದಿರುವುದಾಗಿ ಪಾಲೆಮಾರ್ ತಿಳಿಸಿದರು.
 

ಚುನಾವಣೆಯಲ್ಲಿ ಸ್ವಲ್ಪ ಮಟ್ಟಿನ ಹಿನ್ನೆಡೆಯಾಗಿದ್ದರೂ ಬಳಿಕ ವಿಕಾಸ ಕಾಲೇಜನ್ನು ಕಟ್ಟಿ ಬೆಳೆಸುವ ಕಡೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಯಿತು ಇದರಿಂದ ಸಮಾಜಕ್ಕೆ ಒಳಿತಾಗಿರುವುದು ನೆಮ್ಮದಿಯನ್ನು ತಂದಿದೆ ಎಂದು ಪಾಲೆಮಾರ್ ತಿಳಿಸಿದರು. ಸಮಾರಂಭದ ವೇದಿಕೆಯಲ್ಲಿ ವಿಕಾಸ್ ಕಾಲೇಜಿನ ಸಲಹೆಗಾರರಾದ ಡಾ.ಅನಂತ ಪ್ರಭು ಜಿ., ಪ್ರಾಂಶುಪಾಲರಾದ ವೆಂಕಟ ರಾಯಡು, ಉಪಪ್ರಾಂಶುಪಾಲರಾದ ಮೋಹನ್ ಆರ್., ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ಸೂರಜ್ ಕಲ್ಯ, ಕೊರಗಪ್ಪ ಕೃಷ್ಣಾನಂದ ರಾವ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News