×
Ad

ಜಾಗತಿಕವಾಗಿ ಸಮಾಜವಾದದ ಕಡೆಗೆ ಜನರ ಒಲವು ಹೆಚ್ಚುತ್ತಿದೆ: ವಿ.ಜಿ.ಕೆ.ನಾಯರ್

Update: 2016-06-05 21:28 IST

ಮಂಗಳೂರು, ಜೂ.5: ಜಾಗತಿಕ ಮಟ್ಟದಲ್ಲಿ ಸಮಾಜವಾದದ ಕಡೆಗೆ ಜನರ ಒಲವು ಹೆಚ್ಚುತ್ತಿದೆ. ಜಿಲ್ಲೆಯಲ್ಲಿಯೂ ಕಾರ್ಮಿಕ ಸಂಘಟನೆಗಳನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿಯ ಅಧ್ಯಕ್ಷ ವಿ.ಜಿ.ಕೆ.ನಾಯರ್ ಕರೆ ನೀಡಿದರು.

ಅವರು ಇಂದು ತೊಕ್ಕೊಟ್ಟಿನ ಕಾ.ರಾಮಚಂದ್ರ ಉಚ್ಚಿಲ್ ನಗರದ ಕ್ಲಿಕ್ ಸಭಾಂಗಣದ ಕಾ.ಅಬ್ರಹಾಂ ಕರ್ಕಡ ವೇದಿಕೆಯಲ್ಲಿ ಆರಂಭಗೊಂಡ 2ದಿನಗಳ 15ನೆ ಸಿಐಟಿಯು ದ.ಕ ಜಿಲ್ಲಾ ಸಮ್ಮೇಳನವನುದ್ದೇಶಿಸಿ ಮಾತನಾಡಿದರು.

ಅಮೇರಿಕದಲ್ಲಿ ಸಾಮಾನ್ಯ ಜನರ ಜೀವನ ಪರಿಸ್ಥಿತಿ ದುಸ್ಥಿತಿಗೆ ತಲುಪಿದೆ. ಅಲ್ಲಿನ ದಶಲಕ್ಷ ಜನರು ಸಮಾಜವಾದವನ್ನು ಬೆಂಬಲಿಸಿ ಮಾತನಾಡುತ್ತಿದ್ದಾರೆ. ಬ್ರಿಟನ್ನಿನಲ್ಲೂ ಲೇಬರ್ ಪಕ್ಷದ ಪರವಾದ ವಾತಾವರಣ ವಿಸ್ತಾರಗೊಳ್ಳುತ್ತದೆ. ಫ್ರಾನ್ಸ್‌ನಲ್ಲೂ ಹಲವಾರು ರಂಗಗಳಲ್ಲಿ ಕಾರ್ಮಿಕರ ಬೃಹತ್ ಮುಷ್ಕರಗಳು ನಡೆದಿವೆ. ಸ್ಪೈನ್, ಪೋರ್ಚುಗಲ್, ಗ್ರೀಸ್ ದೇಶಗಳಲ್ಲೂ ಕಾರ್ಮಿಕರ ಪರವಾದ ಚಳವಳಿಗಳು ಹೆಚ್ಚುತ್ತಿವೆ. ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳು ಸಮಾಜವಾದ ಆಡಳಿತವನ್ನು ಆಯ್ಕೆಮಾಡಿಕೊಂಡಿದೆ. ಈ ಎಲ್ಲಾ ಘಟನೆಗಳು ಜಾಗತಿಕವಾಗಿ ಸಮಾಜವಾದದ ಕಡೆಗೆ ಹೆಚ್ಚುತ್ತಿರುವ ಒಲವನ್ನು ತೋರಿಸುತ್ತಿವೆ ಎಂದು ವಿ.ಜಿ.ಕೆ.ನಾಯರ್ ತಿಳಿಸಿದರು.

ಕೆಲವು ಕಡೆ ಬಂಡವಾಳಶಾಹಿ ಬಲಪಂಥ ಬೆಳೆಯುತ್ತಿದ್ದರೂ ಚೀನಾ, ಕ್ಯೂಬಾ, ಕೊರಿಯಾ, ವಿಯೆಟ್ನಾಂ ಮೊದಲಾದ ಕಮ್ಯುನಿಸ್ಟ್ ರಾಷ್ಟ್ರಗಳು, ಇತರ ಸಮಾಜವಾದಿ ರಾಷ್ಟ್ರಗಳು ಅವಕ್ಕೆ ಬಲಿಷ್ಟವಾಗಿ ಸವಾಲೊಡ್ಡುತ್ತಿವೆ. ದಕ್ಷಿಣ ಪೂರ್ವ ದ್ವೀಪ ಸಮೂಹದಲ್ಲಿ ಚೀನಾ ದೇಶದ ಘನ ಕೈಗಾರಿಕೆಗಳ ವಿಸ್ತರಣೆ ಅಮೇರಿಕದ ಕೆಂಗಣ್ಣಿಗೆ ಗುರಿಯಾಗಿದೆ ಎಂದು ವಿಜಿಕೆ ನಾಯರ್ ತಿಳಿಸಿದರು.

ಮೋದಿ ನೇತೃತ್ವದ ಆಡಳಿತದಿಂದ ಕಾರ್ಮಿಕ ವರ್ಗದ ಕಾನೂನು ದುರ್ಬಲ ಗೊಳಿಸುವ ತಂತ್ರ

ಮೋದಿ ನೇತೃತ್ವದ ಆಡಳಿತದಿಂದ ಕಾರ್ಮಿಕ ವರ್ಗದ ಕಾನೂನು ದುರ್ಬಲಗೊಳಿಸುವ ತಂತ್ರಗಾರಿಕೆ ನಡೆಯುತ್ತಿದೆ. ಈ ಸನ್ನಿವೇಶದಲ್ಲಿ ಕಾರ್ಮಿಕರು ತಮ್ಮ ರಕ್ಷಣೆಗಾಗಿ ಜಾಗತಿಕ ಬೆಳವಣಿಗಳನ್ನು ಗಮನಿಸಿ ಮುಂದುವರಿಯಬೇಕು. ಕಾರ್ಮಿಕರು ಭಾರತದಲ್ಲಿ ಕನಿಷ್ಠ 18,000ರೂ. ವೇತನಕ್ಕಾಗಿ)ಹೋರಾಟ ನಡೆಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡಿ ಕಾರ್ಮಿಕರು ಅತ್ಯಂತ ಕನಿಷ್ಠ ಮಟ್ಟದ ಕೂಲಿ ಪಡೆಯುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಬೆಂಗಳೂರಿನಲ್ಲಿ 5ಲಕ್ಷ ಗಾರ್ಮೆಂಟ್ ಉದ್ಯಮದ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ಪ್ರಾವಿಡೆಂಟ್ ಫಂಡ್ ಕಾಯ್ದೆಗೆ ತಂದ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು. ಭಾರತದ ಇತರ ಕಡೆಗಳಲ್ಲೂ ಕಾರ್ಮಿಕ ಸಂಘಟನೆಗಳನ್ನು ಬಲಿಷ್ಠಗೊಳಿಸಿ ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟಕ್ಕೆ ಸಜ್ಜುಗೊಳಿಸಬೇಕಾಗಿದೆ ಎಂದು ವಿಜಿಕೆ ನಾಯರ್ ತಿಳಿಸಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಫ್ಯಾಸಿಸ್ಟ್ ಶಕ್ತಿಯ ಸರಕಾರದ ಸವಾಲನ್ನು ಕಾರ್ಮಿಕ ಸಂಘಟನೆಗಳು ಸ್ವೀಕರಿಸಿ ಅದರ ವಿರುದ್ಧ ಹೋರಾಟ ನಡೆಸಬೇಕು ಎಂದು ಹಿರಿಯ ಕಾರ್ಮಿಕ ಮುಖಂಡ ಬಿ.ಮಾಧವ ಕರೆ ನೀಡಿದರು.

ಹಿರಿಯ ಕಾರ್ಮಿಕ ಮುಖಂಡ ಕೆ.ಆರ್.ಶ್ರೀಯಾನ್ ಮಾತನಾಡುತ್ತಾ ಜನತೆಗ ಹಲವು ಭರವಸೆ ನೀಡಿದ ಬಿಜೆಪಿ ಸರಕಾರ ಜನರ ಹಕ್ಕುಗಳನ್ನು ಮೊಟಕುಗೊಳಿಸಲು ಹೊರಟಿದ್ದಾರೆ.ಅವರೆ ವಿರೋಧಿಸಿದ ವಿದೇಶಿ ನೇರ ಹೂಡಿಕೆಯನ್ನು ವಿಮೆ, ಬ್ಯಾಂಕಿಂಗ್, ರಕ್ಷಣಾ ರಂಗದಲ್ಲಿ ತರಲಾಗುತ್ತಿದೆ.ಕೋಮುವಾದವನ್ನು ಪ್ರಚೋದಿಸಿ ಹಿಂದೂ ರಾಷ್ಟ್ರ ನಿರ್ಮಾಣದ ಹೆಸರಿನಲ್ಲಿ ದುಡಿಯುವ ವರ್ಗವನ್ನು ಒಡೆಯುತ್ತಿದ್ದಾರೆ ಈ ಎಲ್ಲಾ ತಂತ್ರಗಳಿಗೂ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿ ಉತ್ತರ ನೀಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ಮುಖಂಡ ಬಿ.ಮಾಧವರನ್ನು ಸನ್ಮಾನಿಸಲಾಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಿಐಟಿಯು ದ.ಕ ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ವಹಿಸಿದ್ದರು.

ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಜಯಂತ್ ನಾಯ್ಕಾ ವಂದಿಸಿದರು. ಸಮ್ಮೇಳನದಲ್ಲಿ ನಿರ್ಣಯಗಳನ್ನು ಸುನಿಲ್ ಕುಮಾರ್ ಬಜಾಲ್ ಮಂಡಿಸಿದರು. ಬಾಲಕೃಷ್ಣ ಶೆಟ್ಟಿ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News