ನೇತಾಜಿ ಪಂಥೀಯರಿಂದ ಮಕ್ಕಳಿಗೂ ಶಸ್ತ್ರಾಸ್ತ್ರ ತರಬೇತಿ!
ಮಥುರಾ, ಜೂ.5: ಮಥುರಾದಲ್ಲಿ ಕಳೆದ ವಾರ ಮಾರಣಾಂತಿಕ ಘರ್ಷಣೆಗಳ ಕೇಂದ್ರವಾಗಿದ್ದ ಪಂಥವೊಂದು ಸಮಾನಾಂತರ ನ್ಯಾಯಾಂಗ ವ್ಯವಸ್ಥೆ, ತನ್ನದೇ ಆದ ಸಂವಿಧಾನ, ಕಾರಾಗೃಹಗಳು ಹಾಗೂ ಸೈನಿಕರ ಹಲವು ತುಕಡಿಗಳನ್ನು ನಡೆಸುತ್ತಿತ್ತು. ಮಕ್ಕಳಿಗೂ ಅದು ಶಸ್ತ್ರಾಸ್ತ್ರ ತರಬೇತಿ ನೀಡಿತ್ತೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
8ರ ಹರೆಯದ ಸಣ್ಣ ಮಕ್ಕಳಿಗೂ ಈ ಪಂಥ ಶಸ್ತ್ರಾಸ್ತ್ರ ತರಬೇತಿ ನೀಡಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿ ಡಿಎಎಫ್‌ಸಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
2014ರಿಂದಲೇ ಅದು 260 ಎಕ್ರೆ ವಿಸ್ತೀರ್ಣದ ಉದ್ಯಾನವನದಲ್ಲಿ ಅಕ್ಷರಶಃ ಪ್ರಜಾಸತ್ತೆಯೊಂದನ್ನು ನಡೆಸುತ್ತಿತ್ತು. ಆ ಇಡೀ ನಿವೇಶನ ಜಗತ್ತಿನಿಂದ ಮುಚ್ಚಲ್ಪಟ್ಟಿತ್ತು.
ಅನಧಿಕೃತ ಕಾಲನಿಯಲ್ಲಿ ವಾಸವಿದ್ದ 9 ಮಕ್ಕಳನ್ನು ನಿನ್ನೆ ನಗರದ ಮಕ್ಕಳ ಮನೆಗೆ ಕಳುಹಿಸಲಾಗಿದೆ. ಎನ್‌ಡಿಟಿವಿಯೊಂದಿಗೆ ಮಾತನಾಡಿದ 9ರ ಹರೆಯದ ಮೂವರು ಮಕ್ಕಳು ಹಿಂಸಾಚಾರದ ರಾತ್ರಿಯ ಭಯಾನಕತೆಯನ್ನು ನೆನಪಿಸಿಕೊಂಡಿವೆ.
ತಾವು ಮರಗಳ ಹಿಂದೆ ಅಡಗಿಕೊಂಡೆವು ಸುತ್ತಲೂ ಬಾಂಬ್ ಹಾಗೂ ಕಲ್ಲುಗಳನ್ನು ಎಸೆಯಲಾಗುತ್ತಿತ್ತು. ಎಲ್ಲೆಲ್ಲೂ ಗುಂಡುಗಳು ಹಾರುತ್ತಿದ್ದವು ಎಂದು ಅಭಿನವ ಎಂಬ ಬಾಲಕ ವಿವರಿಸಿದ್ದಾನೆ. ಮಕ್ಕಳನ್ನು ಮನೆಗೆ ತರುವ ಮುನ್ನ ಅವರನ್ನು ಮಥುರಾದ ಗೋವಿಂದ ನಗರದ ಕಾರಾಗೃಹಕ್ಕೆ ಒಯ್ಯಲಾಗಿತ್ತೆಂದು ಆತ ತಿಳಿಸಿದ್ದಾನೆ.
ತನ್ನ 8 ಹಾಗೂ 12ರ ಹರೆಯದ ಸೋದರರು ಹಾಗೂ ತಾಯಿ ಈಗಲೂ ಕಾರಾಗೃಹದಲ್ಲಿದ್ದಾರೆಂದು ಅಭಿನವ್ ಹೇಳಿದ್ದಾರೆ. ಆದಾಗ್ಯೂ, ಹಿಂಸಾಚಾರದ ವೇಳೆ ಸುತ್ತುವರಿಯಲಾಗಿದ್ದ ಎಲ್ಲ ಮಕ್ಕಳನ್ನೂ ಮಥುರಾ ಹಾಗೂ ಆಗ್ರಾಗಳ ವಿವಿಧ ಮಕ್ಕಳ ಮನೆಗಳಿಗೆ ಕಳುಹಿಸಲಾಗಿದೆಯೆಂದು ಪೊಲೀಸರು ಪ್ರತಿಪಾದಿಸಿದ್ದಾರೆ.
ಅವರು ಕಾಳಗವೊಂದರ ಬಗ್ಗೆ ಮಾತನಾಡುತ್ತಿದ್ದರು. ಅವರು ಆಡಳಿತವನ್ನು ಬೈಯುತ್ತಿದ್ದರು ಹಾಗೂ ಜವಾಹಾರ್‌ಬಾಗನ್ನು ಎಂದೂ ತೆರವುಗೊಳಿಸುವುದಿಲ್ಲವೆನ್ನುತ್ತಿದ್ದರೆಂದು ಅಲೋಕ್ ಎಂಬಾತ ತಿಳಿಸಿದ್ದಾನೆ.
ತನ್ನ ಚಿಕ್ಕಮ್ಮನೊಂದಿಗೆ ಜವಾಹರ್ ಬಾಗ್‌ಗೆ ಬಂದಿದ್ದ ಬಾಲಕನೊಬ್ಬನು, ತನ್ನನ್ನು ಇಲ್ಲಿಗೆ ತರುವಂತೆ ಪಂಥದ ನಾಯಕ ರಾಮ್ ವೃಕ್ಷ ಯಾದವ್ ಎಂಬಾತ ತಿಳಿಸಿದ್ದನೆಂದು ಹೇಳಿದ್ದಾನೆ.
ರಾಮಕೃಷ್ಣ ಯಾದವ್ ಹೆಸರಿನ ನೇತಾಜಿ ಇಲ್ಲಿರುವನು. ಅವನು ಭಾರತವನ್ನು ಸ್ವತಂತ್ರಗೊಳಿಸುವನು. ಅವನು ಇಲ್ಲಿಗೆ ಬಂದು ತಮಗೆಲ್ಲರಿಗೂ ಒಂದು ಚಿನ್ನದ ನಾಣ್ಯವನ್ನು ಕೊಡುತ್ತಾನೆ. ಕೇವಲ ಅದು ಮಾತ್ರವೇ ಭಾರತದಲ್ಲಿ ಚಲಾವಣೆಯಾಗುವ ಹಣವಾಗಿದೆಯೆಂದು ಹೇಳಿ ಚಿಕ್ಕಮ್ಮ ತನ್ನನ್ನಿಲ್ಲಿಗೆ ಕರೆತಂದಳೆಂದು ಸಂಕೇತ್ ಎಂಬ ಆ ಬಾಲಕ ತಿಳಿಸಿದ್ದಾನೆ.
ಹಿಂಸಾಚಾಋದ ನೇತೃತ್ವ ವಹಿಸಿದ್ದ ಯಾದವ್ ಘರ್ಷಣೆಯ ವೇಳೆ ಹತನಾಗಿದ್ದಾನೆ. ಮಕ್ಕಳನ್ನು ಅವರ ಬಂಧುಗಳಿಗೆ ಹಸ್ತಾಂತರಿಸುವ ಮೊದಲು ಹೆತ್ತವರ ಭೇಟಿಗೆ ಅವಕಾಶ ನೀಡಲಾಗುವುದು. ಯಾರೂ ಬಂಧುಗಳಿರದ ಮಕ್ಕಳು ಮಕ್ಕಳ ಮನೆಯಲ್ಲೇ ಮುಂದುವರಿಯಲಿದ್ದಾರೆಂದು ಮಕ್ಕಳ ಮನೆಯ ಅಧೀಕ್ಷಕರು ಹೇಳಿದ್ದಾರೆ.