ರಂಝಾನ್ ಹಿನ್ನೆಲೆ: ಸೂಕ್ತ ಬಂದೋಬಸ್ತ್ ಸಚಿವ ಖಾದರ್ ಸೂಚನೆ

Update: 2016-06-05 17:29 GMT

ಮಂಗಳೂರು, ಜೂ.5: ಮಂಗಳವಾರದಿಂದ ರಂಝಾನ್ ತಿಂಗಳ ಉಪವಾಸ ಆರಂಭಗೊಂಡಿರುವುದರಿಂದ ಆ ತಿಂಗಳ ರಾತ್ರಿಯ ವಿಶೇಷ ಪ್ರಾರ್ಥನೆಯಲ್ಲಿ ಮಸೀದಿಯಿಂದ ಮನೆಗೆ ತೆರಳುವವರಿಗೆ ಹಲ್ಲೆ ಅಥವಾ ಇನ್ನಿತರ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನಚ್ಚರಿಕಾ ಕ್ರಮವನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್‌ಗೆ ನಿರ್ದೇಶನ ನೀಡಿದ್ದಾರೆ.

ಅಲ್ಲದೆ, ಉಪವಾಸಿಗರಿಗೆ ತೊಂದರೆಯಾಗದಂತೆ ಮೆಸ್ಕಾಂ ಸಹಿತ ಆಹಾರ ಸರಬರಾಜು ಇಲಾಖೆಯನ್ನೂ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.

ಮಳೆಗಾಲ ಪ್ರಾರಂಭವಾಗಿರುವುದರಿಂದ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಉರುಳಿ ವಿದ್ಯುತ್ ಸ್ಥಗಿತಗೊಳ್ಳುವುದು ಸ್ವಾಭಾವಿಕವಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತು ಕೂಡಲೇ ದುರಸ್ತಿಗೊಳಿಸಿ ಸಮಪರ್ಕ ವಿದ್ಯುತ್ ಪೂರೈಕೆಗೆ ಅನುವು ಮಾಡಿಕೊಡಬೇಕು. ಅಲ್ಲದೆ, ಪದೇ ಪದೇ ವಿದ್ಯುತ್ ಕಡಿತಗೊಳಿಸುವುದನ್ನು ನಿಲ್ಲಿಸಬೇಕೆಂದು ಅವರು ಸೂಚಿಸಿರುವುದಾಗಿ ತಿಳಿಸಿದ್ದಾರೆ.

ರಂಝಾನ್ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡುವ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗುಂಡೂರಾವ್ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿರುವ ಸಚಿವರು, ಈ ಸಂಬಂಧ ಆಹಾರ ಇಲಾಖೆಯವರು ಪಡಿತರದಾರರಿಗೆ ಅಕ್ಕಿ, ಸಕ್ಕರೆ ಸಹಿತ ಇತರ ಸಾಮಗ್ರಿಗಳನ್ನು ಸಕಾಲದಲ್ಲಿ ವಿತರಣೆ ಮಾಡಬೇಕೆಂದು ಸೂಚಿಸಿದ್ದಾರೆ.

ಶಾಂತಿ ಕಾಪಾಡಲು ಮನವಿ

ಮುಸ್ಲಿಮರ ಪಾಲಿಕೆ ರಂಝಾನ್ ತಿಂಗಳು ಪವಿತ್ರವಾಗಿರುವುದರಿಂದ ಈ ತಿಂಗಳಲ್ಲಿ ಸರ್ವ ಮುಸ್ಲಿಂ ಜನಾಂಗದವರು ಶಾಂತಿ, ಸೌಹಾರ್ದವನ್ನು ಕಾಪಾಡಿಕೊಳ್ಳಬೇಕೆಂದು ಸಚಿವ ಯು.ಟಿ.ಖಾದರ್ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News