ದಮ್ಮಾಮ್ ನಲ್ಲಿ ಕಾರು ಅಪಘಾತ: ಬಂಟ್ವಾಳ ತಾಲೂಕಿನ ಮಹಿಳೆ ಮೃತ್ಯು
ಬಂಟ್ವಾಳ, ಜೂ. 5: ಸೌದಿ ಅರೇಬಿಯಾದ ದಮ್ಮಾಮ್ ನ ಗಾರಿಯಾ ಎಂಬಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆಯ ಮಹಿಳೆಯೊಬ್ಬರು ಮೃತಪಟ್ಟು, ಅವರ ಪತಿ ಹಾಗೂ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಇಲ್ಲಿನ ನಿವಾಸಿ ಉಮೈಮಾ (37) ಅಪಘಾತದಿಂದ ಮೃತಪಟ್ಟ ಮಹಿಳೆ. ಅವರ ಪತಿ ಅಬ್ದುರ್ರಝಾಕ್(40) ಹಾಗೂ ಮಕ್ಕಳಾದ ಆರಿಫಾ(18), ಮುಹಾ ದ್(9) ಗಂಭೀರ ಗಾಯಗೊಂಡಿದ್ದು ದಮ್ಮಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಅಬ್ದುರ್ರಝಾಕ್ ದಂಪತಿ ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲೇ ನೆಲೆಸಿದ್ದು, ವರ್ಷದ ಹಿಂದೆ ಊರಿಗೆ ಬಂದು ಮರಳಿದ್ದರು. ಇಬ್ಬರು ಮಕ್ಕಳು ಊರಿನಲ್ಲೇ ಇದ್ದು ಶಾಲೆ ರಜೆಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿದ್ದ ತಂದೆ ತಾಯಿಯ ಬಳಿಗೆ ಎರಡು ತಿಂಗಳ ಹಿಂದೆ ತೆರಳಿದ್ದರು.
ಶಾಲೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಊರಿಗೆ ಬರಲು ಇಬ್ಬರು ಮಕ್ಕಳೂ ತಯಾರಿಯಲ್ಲಿದ್ದು ಇಂದು ಬೆಳಗ್ಗೆ ಶಾಪಿಂಗ್ಗೆಂದು ತೆರಳುತ್ತಿದ್ದ ವೇಳೆ ಇವರು ಸಂಚರಿಸುತ್ತಿದ್ದ ಕಾರು ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು ಉಮೈಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಸ್ವರೂಪದ ಗಾಯಗೊಂಡಿರುವ ಪತಿ ಹಾಗೂ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಅಪಘಾತಕ್ಕೊಳಗಾದ ಕಾರನ್ನು ಅಬ್ದುಲ್ ರಝಾಕ್ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.