×
Ad

ಜಮಾಲಬಾದ್ ಕೋಟೆಯಲ್ಲಿ ಪರಿಸರ ಸ್ವಚ್ಛತಾ ಅಭಿಯಾನ

Update: 2016-06-05 23:39 IST

ಬೆಳ್ತಂಗಡಿ, ಜೂ.5: ವನ್ಯಜೀವಿ ವಲಯ ಬೆಳ್ತಂಗಡಿ, ತಾಲೂಕು ಕಾನೂನು ಸೇವಾ ಸಮಿತಿ, ಬೆಳ್ತಂಗಡಿ ವಕೀಲರ ಸಂಘ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ರವಿವಾರ ಪರಿಸರ ಸ್ವಚ್ಛತಾ ಅಭಿಯಾನ ಜಮಾಲಬಾದ್ ಕೋಟೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಎಂ.ಎಫ್.ಸಿ. ಬೆಳ್ತಂಗಡಿಯ ಪ್ರಧಾನ ನ್ಯಾಯಾಧೀಶ ಜಿ. ರಾಘವೇಂದ್ರ ಮಾತನಾಡಿ, ಮುಂದಿನ ಪೀಳಿಗೆಗೆ ಪರಿಸರ ಉಳಿಯಬೇಕಾದರೆ ಪ್ರತಿಯೊಬ್ಬರು ಪರಿಸರ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡು ಪರಿಸರವನ್ನು ಅಭಿವೃದ್ಧಿ ಪಡಿಸಬೇಕು ಎಂದ ಅವರು, ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಜೈಶಂಕರ ಮಾತನಾಡಿ, ಆಧುನಿಕ ಕೈಗಾರೀಕರಣದಿಂದ ಮರಗಳ ನಾಶ ಉಂಟಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರಿಂದ ಅತಿವೃಷ್ಠಿ ಹಾಗೂ ಅನಾವೃಷ್ಠಿ ಉಂಟಾಗಿ ಪ್ರಕೃತಿ ವಿಕೋಪ ಉಂಟಾಗುತ್ತದೆ. ಭೂಮಂಡಲದ ಸುತ್ತಲೂ ಓಝೋನ್ ಪದರದ ವ್ಯತಿರಿಕ್ತ ಪರಿಣಾಮ ಉಂಟಾಗುವುದರ ಬಗ್ಗೆ ತಿಳಿಸಿದರು. ಜಾಗತೀಕ ತಾಪಮಾನವನ್ನು ತಡೆಯಲು ಪ್ರತಿಯೊಬ್ಬ ಪ್ರಜೆಯೂ ಗಿಡಗಳನ್ನು ನೆಟ್ಟು ಬೆಳೆಸಿ, ಪರಿಸರ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ಪರಿಸರ ಸಮತೋಲವನ್ನು ನಿರ್ವಹಣೆ ಮಾಡುವುದರ ಬಗ್ಗೆ ಮಾಹಿತಿ ನೀಡಿದರು.

ಬೆಳ್ತಂಗಡಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಶ್ರೀನಾಥ್ ಎಂ.ಕಡೋಲ್ಕರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಜಮಾಲಬಾದ್ ಕೋಟೆಯ ಮೇಲ್ಭಾಗದಲ್ಲಿ, ಕೋಟೆಯ ಆಸುಪಾಸುಗಳಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ತಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ನಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ನಡ ಇಡಿಸಿಯ ಅಧ್ಯಕ್ಷರು, ಸದಸ್ಯರು, ಬೆಳ್ತಂಗಡಿ ವಕೀಲರ ಸಂಘದ ಸದಸ್ಯರು, ಬೆಳ್ತಂಗಡಿ ವನ್ಯಜೀವಿ ವಲಯದ ಸಿಬ್ಬಂದಿ ಹಾಗೂ ಬೇಟೆ ತಡೆ ನಿಯಂತ್ರಣ ಶಿಬಿರದ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News