×
Ad

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಮಾಜ ತಿದ್ದುವ ಕೆಲಸ: ನಗ್ರಿ ಸುಬ್ರಹ್ಮಣ್ಯ ರಾವ್

Update: 2016-06-05 23:50 IST

ಕಡಬ, ಜೂ.5: ಸಮಾಜದ ದೋಷಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರ ಕಾರ್ಯವೈಖರಿ ಅನನ್ಯ ಎಂದು ಪ್ರಗತಿಪರ ಕೃಷಿಕ ನಗ್ರಿ ಸುಬ್ರಹ್ಮಣ್ಯ ರಾವ್ ಹೇಳಿದ್ದಾರೆ.

 ರವಿವಾರ ಆಲಂಕಾರು ಶ್ರೀ ದುರ್ಗಾಂಬ ಕಾಲೇಜಿನ ಸಭಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಲಂಕಾರು ಗ್ರಾಮದ ಶರವೂರು, ಆಲಂಕಾರು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಲವು ಸಮಸ್ಯೆಗಳಿಂದ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿದ್ದ ಸಂದರ್ಭ ವೀರೇಂದ್ರ ಹೆಗ್ಗಡೆಯವರು ಪುತ್ತೂರು ತಾಲೂಕಿನಲ್ಲಿ ಯೋಜನೆ ಅನುಷ್ಠಾನಗೊಳಿಸಿ ಸ್ವಸಹಾಯ, ಪ್ರಗತಿಬಂಧು ಸಂಘಗಳನ್ನು ರಚಿಸಿ ಒಗ್ಗಟ್ಟಿನಿಂದ ಕೃಷಿ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಲು ಪ್ರೋತ್ಸಾಹ ನೀಡಿದುದರ ಪರಿಣಾಮವಾಗಿ ಜನತೆ ಪ್ರಗತಿ ಹೊಂದಿದ್ದಾರೆ. ಸರಕಾರದ ಮಟ್ಟದ ಯೋಜನೆಗಳನ್ನು ತಳಮಟ್ಟದ ವ್ಯಕ್ತಿಗೆ ತಲುಪಿಸುವಲ್ಲಿ ಯೋಜನೆಯ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಆಲಂಕಾರು ಗ್ರಾಮದ ಜನತೆ ಯೋಜನೆಯಲ್ಲಿ ತೊಡಗಿಸಿಕೊಂಡ ಪರಿಣಾಮ ಗ್ರಾಮದ ಚಿತ್ರಣ ಬದಲಾಗಿದೆ ಎಂದರು.

ತಾಲೂಕು ಪಂಚಾಯತ್ ಸದಸ್ಯೆ ತಾರಾ ಕೇಪುಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಸಬಲೀಕರಣ ಯೋಜನೆಯಿಂದ ಸಾಧ್ಯವಾಗಿದೆ. ಸಂಸ್ಕಾರ ಸಂಸ್ಕೃತಿಗಳ ಉಳಿವಿಗೆ ತಾಯಂದಿರು ಮಕ್ಕಳಿಗೆ ನೀತಿ ಪಾಠ ಬೋಧಿಸಬೇಕಾಗಿದೆ ಎಂದರು.

ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸತ್ಯನಾರಾಯಣ ಭಟ್, ಸಿಂಡಿಕೇಟ್ ಬ್ಯಾಂಕ್ ಆಲಂಕಾರು ಶಾಖಾ ವ್ಯವಸ್ಥಾಪಕ ಪ್ರತಾಪ್ ನಾಯಕ್, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣ ಕೇಂದ್ರದ ವ್ಯವಸ್ಥಾಪಕ ಯತೀಶ್ ಬಳಂಜ ಅತಿಥಿಗಳಾಗಿ ಮಾತನಾಡಿದರು.

ಆಲಂಕಾರು ಒಕ್ಕೂಟ ಅಧ್ಯಕ್ಷೆ ಜಯಾಮಣಿ, ಶರವೂರು ಒಕ್ಕೂಟ ಅಧ್ಯಕ್ಷ ಮಾಯಿಲಪ್ಪಮಾತನಾಡಿ, ಸೇವಾ ಅವಧಿಯಲ್ಲಿ ಯೋಜನೆಯ ಸದಸ್ಯರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಆಲಂಕಾರು ಒಕ್ಕೂಟ ನೂತನ ಅಧ್ಯಕ್ಷ ದಯಾನಂದ ಗೌಡ ಬಡ್ಡಮೆ, ಶರವೂರು ಒಕ್ಕೂಟ ನೂತನ ಅಧ್ಯಕ್ಷ ಶೀನಪ್ಪ ಕುಂಬಾರ ಮಾತನಾಡಿ ಮುಂದಿನ ಸೇವಾ ಅವಧಿಯ ಕಾರ್ಯ ಯೋಜನೆಗಳಿಗೆ ಯೋಜನೆಯ ಸದಸ್ಯರು ಸಹಕಾರ ನೀಡುವಂತೆ ಕೇಳಿಕೊಂಡರು.

ವಾರಿಜಾ ಸಾಧನಾ ವರದಿ ಮಂಡಿಸಿದರು. ಹರೀಶ್ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಸೇವಾಪ್ರತಿನಿಧಿ ಪ್ರೇಮಾ ಸ್ವಾಗತಿಸಿದರು. ಯೋಜನೆಯ ಉಪ್ಪಿನಂಗಡಿ ವಲಯ ಮೇಲ್ವಿಚಾರಕ ಶೇಖರ್ ಜೆ. ನಿರೂಪಿಸಿದರು. ಶಿವಣ್ಣ ಗೌಡ ಕಕ್ವೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News