ಪ್ರತೀ ತಾಲೂಕು ಕೇಂದ್ರದಲ್ಲಿ ಸ್ವಂತ ಪತ್ರಿಕಾ ಭವನ ನಿರ್ಮಾಣಕ್ಕೆ ಸಂಘ ಬದ್ಧ: ಎಂ.ಎಸ್.ಮಣಿ
ಬಂಟ್ವಾಳ, ಜೂ. 7: ಕರ್ನಾಟಕ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪತ್ರಕರ್ತರ ಅನುಕೂಲಕ್ಕಾಗಿ ಸ್ವಂತ ಪತ್ರಿಕಾ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಣಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಬಂಟ್ವಾಳ ತಾಲೂಕು ಕಾರ್ಯನಿರತ ಪ್ರಕರ್ತರ ಸಂಘದ ಬಿ.ಸಿ.ರೋಡಿನಲ್ಲಿರುವ ಪ್ರೆಸ್ ಕ್ಲಬ್‌ಗೆ ಮಂಗಳವಾರ ಭೇಟಿ ನೀಡಿದ ಅವರು ಸಂಘದ ಪದಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ರಾಜ್ಯದಲ್ಲಿ ಪತ್ರಕರ್ತರನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲೂ ಪತ್ರಿಕಾ ಭವನ ನಿರ್ಮಿಸುವ ಉದ್ದೇಶವನ್ನು ಸಂಘ ಹೊಂದಿದ್ದು ಈ ದಿಸೆಯಲ್ಲಿ ಸರಕಾರಿ ಜಮೀನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸಲಹೆ ನೀಡಿದರು.
ಇದೇ ವೇಳೆ ಪತ್ರಕರ್ತರಿಗೆ ಮಾಸಾಶನ ಸೇರಿದಂತೆ ಲಭ್ಯವಿರುವ ಇತರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದ ಅವರು, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಪ್ರಸಕ್ತ ರಜತ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಸಂಘವು ಮಾದರಿ ತಾಲೂಕು ಘಟಕವಾಗಿ ಕಾರ್ಯಾಚರಿಸುವುದು ಅಭಿನಂದನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪತ್ರಕರ್ತರ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಯಿತು. ಪ್ರೆಸ್‌ಕ್ಲಬ್ ಉಪಾಧ್ಯಕ್ಷ ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಸದಸ್ಯರಾದ ಕಿಶೋರ್ ಪೆರಾಜೆ, ಯಾದವ ಅಗ್ರಬೈಲ್ ಮೊದಲಾದವರು ಉಪಸ್ಥಿತರಿದ್ದರು.