ಉಚ್ಚಿಲ: ಅನುಪಮಾ ಶೆಣೈ ನಿವಾಸಕ್ಕೆ ಬಳ್ಳಾರಿ ಪೊಲೀಸರು ಭೇಟಿ

Update: 2016-06-08 12:33 GMT

ಪಡುಬಿದ್ರೆ, ಜೂ.8: ಇತ್ತೀಚೆಗೆ ರಾಜಿನಾಮೆ ನೀಡಿದ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈಯವರ ಉಚ್ಚಿಲದಲ್ಲಿರುವ ಮನೆಗೆ ಬಳ್ಳಾರಿ ಪೊಲೀಸರು ಭೇಟಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಬಡಾ ಗ್ರಾಮದ ಉಚ್ಚಿಲದ ಜನಪ್ರಿಯ ಮಿಲ್ ಬಳಿ ಇರುವ ಮನೆಗೆ ಬುಧವಾರ ಬೆಳಗ್ಗೆ ಬಳ್ಳಾರಿ ಪೊಲೀಸರು ಭೇಟಿ ನೀಡಿ ಅನುಪಮಾ ಶೆಣೈ ಅವರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ಆದರೆ ಈ ವೇಳೆ ತಾಯಿ ನಳಿನಿ ಮಾತ್ರ ಮನೆಯಲ್ಲಿದ್ದರು. ಶೆಣೈ ಅವರ ಬಗ್ಗೆ ಇವರಲ್ಲಿ ವಿಚಾರಿಸಿದಾಗ ಆಕೆ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದಿದ್ದಾರೆ. ಒಂದು ವೇಳೆ ಸಂಪರ್ಕಕ್ಕೆ ಸಿಕ್ಕಿದರೆ ರಾಜಿನಾಮೆ ನೀಡಬೇಡಿ ಎಂದು ಮನವೊಲಿಸುವಂತೆಯೂ ಪೊಲೀಸರು ಪೋಷಕರಿಗೆ ಮನವಿ ಮಾಡಿದ್ದಾರೆ.

ಆ ಬಳಿಕ ಪಡುಬಿದ್ರೆ ಪೊಲೀಸರು ಮನೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಈ ವೇಳೆಯೂ ತಾಯಿ ಹೊರತುಪಡಿಸಿ ತಂದೆ ರಾಧಾಕೃಷ್ಣ ಮತ್ತು ಸಹೋದರ ಅಚ್ಚುತ ಶೆಣೈ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಹಾಗೆ ಬರೆಯುವವರಲ್ಲ

ಅನುಪಮಾ ಶೆಣೈ ಅವರ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿರುವ ಸಾಧ್ಯತೆ ಇದೆ. ಆಕೆ ಆ ತರಹ ಬರೆಯುವವರಲ್ಲ ಎಂದು ಅನುಪಮಾ ಶೆಣೈ ಅವರ ಸಹೋದರ ಅಚ್ಚುತ ಶೆಣೈ ಪತ್ರಿಕೆಗೆ ತಿಳಿಸಿದ್ದಾರೆ.

ನಿನ್ನೆಯಿಂದ ನಮ್ಮ ಸಂಪರ್ಕದಲ್ಲಿ ಇಲ್ಲ. ಮೊಬೈಲ್ ನಾಟ್ ರೀಚೇಬಲ್ ಬರುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜಿನಾಮೆ ವಾಪಾಸು ಪಡೆಯಲು ಹೇಳಿದ್ದಾರೆ. ಆಕೆಯ ನಿರ್ಧಾರ ತೆಗೆದುಕೊಳ್ಳುವ ವಿಚಾರ ಏನು ಗೊತ್ತಿಲ್ಲ. ನಾಳೆ ಸಂಜೆ ಅಥವಾ ಮಧ್ಯಾಹ್ನ ಮಾಧ್ಯಮಗಳ ಮುಂದೆ ಬಂದು ಮಾತನಾಡಬಹುದು ಎಂದು ಹೇಳಿದ್ದಾರೆ.

ಒತ್ತಡದಿಂದ ರಾಜಿನಾಮೆ

ಸಹೋದರಿ ಅನುಪಮಾ ಶೆಣೈ ಒತ್ತಡದಿಂದಾಗಿ ರಾಜಿನಾಮೆ ನೀಡಿದ್ದು ಖಂಡಿತ. ಅವರಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಕಿರುಕುಳ ನೀಡಲಾಗುತ್ತಿತ್ತು. ಈ ಘಟನೆಯಲ್ಲಿ ಸಚಿವ ಪರಮೇಶ್ವರ ನಾ ಅವರ ಕುಮ್ಮಕ್ಕಿದೆ. ಮೊದಲನೆಯದಾಗಿ ಅನುಪಮಾಳ ರಾಜಿನಾಮೆಯನ್ನು ಅಂಗೀಕರಿಸಬಾರದು. ಅಂತೆಯೇ ಪರಮೇಶ್ವರ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು. ಲಿಕ್ಕರ್ ಲಾಬಿಯವರಿಗೆ ಅನುಪಮಾರ ದಿಟ್ಟ ನಿರ್ಧಾರದಿಂದ ಖಂಡಿತವಾಗಿ ನಷ್ಠ ಉಂಟಾಗಿದೆ. ಆ ನಷ್ಟವನ್ನು ಸರದೂಗಿಸಲು ಅನುಪಮಾರನ್ನು ದಾಳವಾಗಿ ಬಳಸಿಕೊಳ್ಳಲಾಗಿದೆ ಎಂದು ಅಚ್ಚುತ ಶೆಣೈ ಹೇಳಿದರು.

ರಾಜಿನಾಮೆ ನೀಡಿದಂದಿನಿಂದ ನಮ್ಮ ಕುಟುಂಬ ಅವಳಿಗೆ ಬೆನ್ನೆಲುಬಾಗಿ ನಿಂತಿದೆ. ಅವಳು ಹೇಗೆ ಕೆಲಸ ಮಾಡುತ್ತಾಳೆಂಬುದು ನಮಗೆ ಗೊತ್ತು. ಯಾವುದೇ ಕೆಲಸ ಮಾಡಲು ಪಾರಂಭಿಸಿದರೆ, ಅದನ್ನು ಕೊನೆಗಾಣಿಸಿಯೇ ಬಿಡುವ ಛಲಗಾರ್ತಿ. ಇಲ್ಲಿಯೂ ಆಕೆಗೆ ನ್ಯಾಯ ಸಿಗದಿದ್ದಲ್ಲಿ ಆಕೆ ಹೋರಾಟದ ದಾರಿಯನ್ನು ತುಳಿಯುವುದು ಖಂಡಿತ.
ಸಚಿವ ಪರಮೇಶ್ವರ್ ನಾಯ್ಕ ರಾಜಿನಾಮೆಗೆ ರಾಜ್ಯದ ಜನತೆ ಒತ್ತಾಯ ಮಾಡಬೇಕೆಂದು ಹೇಳಿದ ಅಚ್ಚುತ ಶೆಣೈ, ಅನುಪಮಾರ ರಾಜೀನಾಮೆಯನ್ನು ಅಂಗೀಕಾರ ಮಾಡಬಾರದು. ಕೂಡ್ಲಿಗಿಯಲ್ಲಿ ಆಕೆಗೆ ಕೆಲಸ ಮಾಡಲು ಒತ್ತಡ ಹೇರಲಾಗುತ್ತಿದೆ. ಮಂಗಳೂರಿನಲ್ಲಾದರೂ ಅವರ ಸೇವೆಗೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದರು.

ಕಷ್ಟಪಟ್ಟು ಓದಿಸಿದ್ದೆ

ಉಚ್ಚಿಲದಲ್ಲಿ ಸಣ್ಣದೊಂದು ಕ್ಯಾಂಟೀನ್ ನಡೆಸುತ್ತಿರುವ ಅವರು, ನಾನು ಮಗಳಿಗೆ ಕಷ್ಟಪಟ್ಟು ಓದಿಸಿದ್ದೆ. ಹೀಗೆಲ್ಲಾ ಆಗುವುದು ಗೊತ್ತಾಗಿದಿದ್ದರೆ ನಾನು ಕೆಲಸಕ್ಕೆ ಕಳುಹಿಸುತ್ತಿರಲಿಲ್ಲ. ನಾನು ಅವಳನ್ನು ಸಾಕುತ್ತಿರುವವರೆಗೆ ಒಟ್ಟಿಗೆ ಇದ್ದೆವು. ಆಕೆ ರಾಜೀನಾಮೆ ನೀಡುವ ಮೊದಲು ರಾತ್ರಿ ಹೊತ್ತು ಕೆಲವರು ಬಂದು ಬಾಗಿಲು ಬಡಿದು ಹೆದರಿಸುತ್ತಿದ್ದರು. ಇದರಿಂದ ನೊಂದಿದ್ದಾಳೆ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರಿಗೆ ಈ ರೀತಿ ದೌರ್ಜನ್ಯವಾದರೆ ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು ಎನ್ನುತ್ತಾರೆ ಅವರ ತಾಯಿ ನಳಿನಿ.

ಪೇಟೆಯಲ್ಲಿ 40ವರ್ಷಗಳಿಂದಲೂ ಸಣ್ಣದೊಂದು ಚಹಾ ಕ್ಯಾಂಟೀನ್ ನಡೆಸುತ್ತಿರುವ ಜನಪ್ರಿಯ ಮಿಲ್ ಸಮೀಪದ ನಿವಾಸಿ ನಳಿನಿ ಮತ್ತು ರಾಧಾಕೃಷ್ಣ ಶೆಣೈ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ ಮಗಳೇ ಅನುಪಮಾ ಶೆಣೈ. ಇನ್ನಿಬ್ಬರು ಸಹೋದರರು. ಒಬ್ಬರು ಅಚ್ಯುತ್ ಶೆಣೈ. ಇನ್ನೋರ್ವ ಅರವಿಂದ ಶೆಣೈ. ಮೂವರು ಮಕ್ಕಳಿಗೂ ಉತ್ತಮ ಶಿಕ್ಷಣವನ್ನು ರಾಧಾಕೃಷ್ಣ ಶೆಣೈ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News