ಪ್ರತಿ ಮನೆಗಳಲ್ಲಿ ನೀರಿಂಗಿಸುವ ಕೆಲಸವಾಗಲಿ:ಮೀನಾಕ್ಷಿ ಶಾಂತಿಗೋಡು

Update: 2016-06-08 13:22 GMT

ಪುತ್ತೂರು, ಜೂ.8: ಜನರ ನಿರ್ಲಕ್ಷ್ಯದ ಪರಿಣಾಮವಾಗಿ ಅತ್ಯಮೂಲ್ಯವಾಗಿರುವ ನೀರಿನ ಸಮಸ್ಯೆ ಉಲ್ಭಣಗೊಳ್ಳುತ್ತಿದ್ದು, ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ಮನೆಗಳಲ್ಲಿಯೂ ನೀರಿಂಗಿಸುವ ಕೆಲಸವಾಗಬೇಕು ಎಂದು ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದ್ದಾರೆ.

ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ. ಜಿ.ಪಂ., ಪುತ್ತೂರು ತಾ.ಪಂ. ಸಹಯೋಗದಲ್ಲಿ ಬುಧವಾರ ಪುತ್ತೂರು ತಾಲೂಕಿನ ಇರ್ದೆ- ಬೆಟ್ಟಂಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಜಲ ಮರುಪೂರಣ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬಂಟ್ವಾಳ ತಾಲೂಕಿನ ಸುರಿಬೈಲು ಸರಕಾರಿ ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಂ.ಅಬೂಬಕರ್ ಮಾತನಾಡಿ, ಕರಾವಳಿ ಭಾಗದಲ್ಲಿ ಒಮ್ಮೆ ಮಳೆಯಾದರೆ ಸುಮಾರು 1.5 ಲಕ್ಷ ಲೀಟರ್ ನೀರು ಶೇಖರಣೆಯಾಗುತ್ತದೆ. ಅಷ್ಟೂ ನೀರನ್ನು ನಮ್ಮ ಬಾವಿಗಳು ಇಂಗಿಸಿಕೊಳ್ಳುತ್ತಿವೆ. ಆದರೂ ಬಾವಿಗಳು ಪೂರ್ತಿಯಾಗಿ ತುಂಬಿಕೊಳ್ಳುವುದಿಲ್ಲ. ನೀರು ಶೇಖರಣೆಗಾಗಿ ಸಾಮೂಹಿಕ ಪ್ರಯತ್ನ ನಡೆಯಬೇಕು. ಪ್ರತಿ ಗ್ರಾಮಗಳಲ್ಲಿ ಜಲಕ್ರಾಂತಿಯಾಗಬೇಕು. ಇದಕ್ಕಾಗಿ ಜನಪ್ರತಿನಿಧಿಗಳು, ಸಾರ್ವಜನಿಕರು ಮುಂದಾಗಬೇಕು ಎಂದರು.

ಮಳೆ ಕಡಿಮೆಯಾಗಲು ನಾವೇ ಕಾರಣವಾಗಿದ್ದು ನಿರಂತರ ಕಾಡು ನಾಶದಿಂದ ಹಾಗೂ ಕಾಂಕ್ರಿಟ್ ಕಾಡುಗಳ ನಿರ್ಮಾಣದಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಪ್ರತಿ ನಿಮಿಷಕ್ಕೆ 2 ಎಕ್ರೆ ಕಾಡು ನಾಶವಾಗುತ್ತಿದೆ. ಹೀಗೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆ ಬರಡು ಭೂಮಿಯಾಗುವ ಅಪಾಯವಿದೆ. ಸಾವಿರಾರು ವರ್ಷದಿಂದ ಭೂಮಿಯಲ್ಲಿ ಇಂಗಿದ ನೀರನ್ನು ಇಂದು ನಾವು ಬಳಕೆ ಮಾಡುತ್ತಿದ್ದೇವೆ. ಆದ್ದರಿಂದ ಸಾಧ್ಯವಾದಷ್ಟು ನೀರನ್ನು ಇಂಗಿಸುವ ಕೆಲಸ ಮುಂದುವರಿಸಬೇಕು. ನೀರು ಪೋಲಾಗದಂತೆ ಎಚ್ಚರ ವಹಿಸುತ್ತಾ ಬೇಕಿದ್ದಷ್ಟೇ ಬಳಕೆ ಮಾಡಬೇಕು ಎಂದರು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಅಧ್ಯಕ್ಷತೆ ವಹಿಸಿದ್ದರು. ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷೆ ಉಮಾವತಿ, ಇರ್ದೆ ಉಪ್ಪಳಿಗೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಿತ್ಯಾನಂದ ಬೈಲಾಡಿ, ನಿಡ್ಪಳ್ಳಿ ಗ್ರಾಪಂ ಅಧ್ಯಕ್ಷೆ ಸುಮತಿ, ತಾಪಂ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಹರೀಶ್ ಬಿಜತ್ರೆ, ಮೀನಾಕ್ಷಿ ಮಂಜುನಾಥ್, ಉದ್ಯೋಗ ಖಾತ್ರಿ ಯೋಜನೆಯ ದ.ಕ. ಜಿಲ್ಲಾ ನಿಕಟಪೂರ್ವ ಒಂಬುಡ್ಸ್‌ಮನ್ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ತಾಪಂ ಇಓ ಜಗದೀಶ್ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇರ್ದೆ-ಬೆಟ್ಟಂಪಾಡಿ ಶಾಲಾ ಮುಖ್ಯಗುರು ನಾರಾಯಣ ಕೆ ವಂದಿಸಿದರು. ಬಿಆರ್‌ಪಿ ದಿನೇಶ್ ಗೌಡ ಕೆ. ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಬಳಿಕ ಬಾವಿಗೆ ಹಾಗೂ ಕೊಳವೆ ಬಾವಿಗೆ ಜಲ ಮರುಪೂರಣ ಮಾಡುವ ಪ್ರಾತ್ಯಕ್ಷಿಕೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News