ಕಯ್ಯರ ಕಿಂಞಣ್ಣ ರೈ ನವೋದಯ ಸಾಹಿತ್ಯ ರಂಗವನ್ನು ಶ್ರೀಮಂತಗೊಳಿಸಿದ ಕವಿ: ಸದಾನಂದ ಪೆರ್ಲ

Update: 2016-06-08 13:37 GMT

ಮಂಗಳೂರು, ಜೂ. 8: ಕಯ್ಯರ ಕಿಂಞಣ್ಣ ರೈ ಅವರು ನವೋದಯ ಸಾಹಿತ್ಯ ರಂಗದಲ್ಲಿ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿದ ಬಹುದೊಡ್ಡ ಕವಿಯಾಗಿದ್ದರು ಎಂದು ಮಂಗಳೂರು ಆಕಾಶವಾಣಿಯ ನಿರ್ದೇಶಕ ಸದಾನಂದ ಪೆರ್ಲ ಹೇಳಿದರು.

ಅವರು ನಗರದ ಕೊಡಿಯಾಲ್‌ಬೈಲಿನಲ್ಲಿರುವ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ಕಯ್ಯಾರ ಕಿಂಞಣ್ಣ ರೈ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಯ್ಯರ ಕಿಂಞಣ್ಣ ರೈ ಅವರು ಕನ್ನಡ ನಾಡು ಕಂಡ ಧೀಮಂತ, ದಾರ್ಶನಿಕ ಕವಿಯಾಗಿದ್ದು, ಅವರ ಆಚಾರ, ವಿಚಾರ, ನಡೆ, ನುಡಿ ಒಂದೆ ಆಗಿತ್ತು. ಗಾಂಧೀ ಪ್ರೇರಿತ ಸಿದ್ಧಾಂತವನ್ನು ಒಪ್ಪಿ ಜೀವನ ನಡೆಸಿದ ಕಯ್ಯಿರ ಕಿಂಞಣ್ಣ ರೈ ಅವರು ತಮ್ಮ ಇಡೀ ಬದುಕಿನಲ್ಲಿ ಗಾಂಧಿ ಸಿದ್ದಾಂತವನ್ನು ಅನುಸರಿಸಿದವರು. ಜಾತಿ, ಅಸಮಾನತೆ, ಕಂದಾಚಾರದ ಬಗ್ಗೆ ಸಾಹಿತ್ಯವನ್ನು ಬರೆದರು. ಅವರೊಬ್ಬ ಕವಿ ಶಿಕ್ಷಕ ಮಾತ್ರವಾಗಿರದೆ ಸಮಾಜ ಸುಧಾರಕರಾಗಿ ಕೆಲಸ ಮಾಡಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ನೀಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ದ.ಕ. ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸಿದ್ದರು.

 ಸಮಾರಂಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮುಹಮ್ಮದ್ ಹನೀಫ್, ಸಾಹಿತಿ ಕೆ.ಎಸ್.ಕಲ್ಲೂರಾಯ, ಕಸಾಪ ಮಂಗಳೂರು ವಲಯಾಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ.ಪುರಾಣಿಕ್, ಪ್ರಾಂಶುಪಾಲೆ ಲೀಲಾ ಉಪಾಧ್ಯಾಯ ಉಪಸ್ಥಿತರಿದ್ದರು. ದಯಾನಂದ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News