ಬದಿಯಡ್ಕ: ಕಯ್ಯರ ಕಿಂಞಣ್ಣ ರೈ ಜನ್ಮದಿನಾಚರಣೆ
ಕಾಸರಗೋಡು, ಜೂ.8: ಕಯ್ಯರ ಕಿಂಞಣ್ಣ ರೈಯವರು ರಚನಾತ್ಮಕ ಬದುಕು ಮತ್ತು ಬರಹಗಳ ಮೂಲಕ ನಮಗೆ ಮಾದರಿಯಾಗಿ ಬದುಕುಕಿದ್ದರು ಎಂದು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಬಾಲಕೃಷ್ಣ ಹೊಸಂಗಡಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಬುಧವಾರ ಬದಿಯಡ್ಕ ನವಜೀವನ ಹೈಯರ್ ಸೆಕಂಡರಿ ಶಾಲೆಯಲ್ಲಿ ನಾಡೋಜ ದಿ. ಕಯ್ಯರ ಕಿಂಞಣ್ಣ ರೈಯವರ ಜನ್ಮ ದಿನಾಚರಣೆಯಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಯ್ಯರರು ಗಾಂಧಿ ಮತ್ತು ನೆಹರೂರ ಪ್ರಭಾವದಿಂದ ಸ್ವಾತಂತ್ರ್ಯ, ಸಾರ್ವಭೌಮತೆಯ ಕಾವ್ಯ ಕೃಷಿ ನಡೆಸಿದ್ದರು. ರಾಜಕೀಯ ನಾಯಕರಾಗಿ ಸ್ವದೇಶಿ, ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು,ಅಸ್ಪಶ್ಯತೆ, ಸಾಮಾಜಿಕ ಏಕತೆ, ಕೃಷಿ ಸ್ವಾವಲಂಬನೆಗೆ ಮಾದರಿಯಾದ ಅಪರೂಪದ ನೆಲದ ಸಾಹಿತಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ನಾಟಕ ಅಕಾಡಮಿ ಸದಸ್ಯ ಉಮೇಶ್ ಎಂ. ಸಾಲಿಯಾನ್, ಪ್ರಾಂಶುಪಾಲ ಪಿ.ರಾಮಚಂದ್ರನ್, ದುರ್ಗಾಪ್ರಸಾದ್ ರೈ, ಜಯಶಂಕರ ರೈ, ಡಾ.ಪ್ರಸನ್ನ ರೈ, ಶಂಕರ ಸಾರಡ್ಕ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕಿ ಡಾ.ಯು.ಮಹೇಶ್ವರಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ರಾಧಾಕೃಷ್ಣ ಉಳಿಯತ್ತಡ್ಕ, ಹರೀಶ ಪೆರ್ಲ, ವಿಜಯಲಕ್ಷ್ಮಿ ಶ್ಯಾನುಭೋಗ್, ವೆಂಕಟ ಭಟ್ ಮೊದಲಾದವರು ಕವನ ವಾಚಿಸಿದರು. ರಾಮಚಂದ್ರ ಭಟ್ ಧರ್ಮತ್ತಡ್ಕ ಸ್ವಾಗತಿಸಿ, ಸುಬ್ಬಣ್ಣ ಶೆಟ್ಟಿ ವಂದಿಸಿದರು.