×
Ad

6 ಮಂದಿ ದರೋಡೆಕೋರರ ಬಂಧನ

Update: 2016-06-08 21:33 IST

ಮಂಗಳೂರು, ಜೂ. 8: ಗೂಡ್‌ಶೆಡ್ಡೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಅವರ ಬಳಿಯಿದ್ದ ಸೊತ್ತುಗಳನ್ನು ದರೋಡೆಗೈದ ಪ್ರಕರಣವನ್ನು ಬೇಧಿಸಿರುವ ನಗರ ದಕ್ಷಿಣ ಠಾಣಾ ಪೊಲೀಸರು ಈ ಸಂಬಂಧ ಆರು ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

 ಬಂಧಿತ ಆರೋಪಿಗಳನ್ನು ಬಂದರ್ ಮಿಶನ್‌ಸ್ಟ್ರೀನ್‌ನ ನಿವಾಸಿ ಸರ್ಫುದ್ದೀನ್ (19), ಫೈಸಲ್‌ನಗರದ ಮಹಮ್ಮದ್ ರಮಲಾನ್ (20), ಕೃಷ್ಣಾಪುರದ ನಿವಾಸಿಗಳಾದ ಶೇಖ್ ಮುಹಮ್ಮದ್ ಸಫಾನ್ (19), ಮುಹಮ್ಮದ್ ಆರಿಫ್ ಫೈಜಲ್ (19), ಕಲ್ಲಾಪು ನಿವಾಸಿ ಸಲ್ಮಾನ್ ಫಾರಿಸ್ (19) ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ

ಜೂನ್ 5ರಂದು ಗುಣಪ್ರಸಾದ್ ಎಂಬವರು ಗೂಡ್‌ಶೆಡ್ಡೆಯಲ್ಲಿರುವ ಸೋಮನಾಥ ದೇವಸ್ಥಾನಕ್ಕೆ ಹೋಗಿ ವಾಪಾಸು ಸ್ಟೇಟ್‌ಬ್ಯಾಂಕ್ ಕಡೆಗೆ ಗೂಡು ಶೆಡ್ಡೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅಲ್ಲಿದ್ದ ಮೂವರು ಮಂದಿ ತಡೆದು ನಿಲ್ಲಿಸಿ, ಕೆಲವೇ ಹೊತ್ತಿನಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಮತ್ತೆ ಮೂವರು ಸೇರಿ ಒಟ್ಟು 6 ಮಂದಿಯ ತಂಡ ಗುಣಪ್ರಸಾದ್‌ರನ್ನು ಅಡ್ಡಗಟ್ಟಿದ್ದರು. ಬಳಿಕ ಅವರನ್ನು ಬಲವಂತವಾಗಿ ರೈಲ್ವೆ ಟ್ರ್ಯಾಕ್ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಅವರ ಕೈಯಲ್ಲಿದ್ದ ಕ್ಯಾಮರಾ, ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಪ್ಯಾಂಟಿನಲ್ಲಿದ್ದ ಮೊಬೈಲ್, ನಗದು ಹಾಗೂ ಎಟಿಎಮ್ ಕಾರ್ಡ್ ಸಹಿತ ಪರ್ಸ್‌ನ್ನು ದರೋಡೆ ಮಾಡಿದ್ದರು. ದರೋಡೆ ಮಾಡಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1,31,500 ಎಂದು ಅಂದಾಜಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಇಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಆರು ಮಂದಿಯನ್ನೂ ವಶಕ್ಕೆ ಪಡೆದು ದರೋಡೆಗೈಯ್ಯಲಾದ 70,000 ರೂ.ಮೌಲ್ಯದ ಕ್ಯಾಮರಾ, 18 ಗ್ರಾಂ ತೂಕದ ಸುಮಾರು 48,000 ರೂ. ಮೌಲ್ಯದ ಚಿನ್ನದ ಸರ, ಸುಮಾರು 12,000 ರೂ. ಮೌಲ್ಯದ ಮೊಬೈಲ್, ಮೂರು ಡೆಬಿಡ್ ಕಾರ್ಡ್ ಇದ್ದ ಪರ್ಸ್ ಹಾಗೂ ಆರೋಪಿಗಳು ದರೋಡೆಗೆ ಉಪಯೋಗಿಸಿದ ಸುಮಾರು 50,000ರೂ.ವೌಲ್ಯದ ಸ್ಕೂಟರ್ ಸಹಿತ ಆರೋಪಿಗಳಿಂದ ಒಟ್ಟು 1,81,500 ರೂ. ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಸದರಿ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಶಾಂತರಾಮ್, ಪಿಎಸ್ಸೈ ಅನಂತ ಮುರ್ಡೇಶ್ವರ, ಪಿಎಸ್ಸೈ ಮುಹಮ್ಮದ್ ಶರೀಫ್, ಸಿಬ್ಬಂದಿ ಎಎಸ್ಸೈ ಕೆ.ಗವಾರ್, ಯು.ಆರ್.ಡಿಸೋಜಾ, ವಿಶ್ವನಾಥ, ಗಂಗಾಧರ, ಧನಂಜಯಗೌಡ, ಸತ್ಯನಾರಾಯಣ, ಶೇಖರ ಗಟ್ಟಿ, ಪುರುಷೋತ್ತಮ, ನೂತನ್ ಕುಮಾರ್, ಭೀಮಪ್ಪ, ಗೋಪಾಲಕೃಷ್ಣ, ಶಶಿಕುಮಾರ್ ವಿನೋದ, ಚಂದ್ರಶೇಖರ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News