ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತೈಲ ಬೆಲೆ ಇಳಿಕೆಯ ಹಣ ಬಳಕೆ: ನಿರ್ಮಲಾ ಸೀತಾರಾಮನ್
ಮಂಗಳೂರು,ಜೂ.8: ಜಾಗತಿಕವಾಗಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ಅದರ ಪ್ರಯೋಜನವನ್ನು ವೈಯಕ್ತಿವಾಗಿ ಸರಕಾರ ವಿತರಿಸದೆ ಇದ್ದರೂ ಜನರಿಗೆ ಉತ್ತಮ ರಸ್ತೆ ನಿರ್ಮಾಣದಂತಹ ಸಾರ್ವಜನಿಕ ಸೌಲಭ್ಯಗಳನ್ನು ನೀಡಲು ಆ ಆದಾಯವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ವಾಣಿಜ್ಯ ಖಾತೆಯ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಅವರು ಇಂದು ನಗರದಲ್ಲಿ ಕೇಂದ್ರ ಸರಕಾರದ ಸಾಧನೆಯ ಸಮಾವೇಶ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾದಾಗ 9 ಬಾರಿ ಭಾರತದಲ್ಲೂ ತೈಲ ಬೆಲೆ ಇಳಿಕೆಯಾಗಿದೆ. ಅದರಿಂದ ಜನರಿಗೆ ನೇರವಾಗಿ ಬೆಲೆ ಇಳಿಕೆ ಸೌಲಭ್ಯ ದೊರೆತಿದೆ. ಉಳಿದಂತೆ ಕೇಂದ್ರ ಸರಕಾರ ಸಾರ್ವಜನಿಕರಿಗೆ ಸಾಮೂಹಿಕವಾಗಿ ಪ್ರಯೋಜನವಾಗುವ ಅಭಿವೃದ್ಧಿ ಯೋಜನೆಗಳಿಗೆ ಈ ಅದಾಯವನ್ನು ತೊಡಗಿಸುತ್ತಿದೆ ಎಂದು ಪೆಟ್ರೋಲ್ ಬೆಲೆ ಏರಿಕೆ ಇಳಿಕೆ ಸಂದರ್ಭದ ಸರಕಾರದ ನಿರ್ಧಾರವನ್ನು ಸಚಿವೆ ಸಮರ್ಥಿಸಿಕೊಂಡರು.
ಕೈಗಾರಿಕೆಗಳಿಗೆ ಭೂ ಸ್ವಾಧೀನ ಕ್ರಮ ರಾಜ್ಯ ಸರಕಾರಕ್ಕೆ ಸೇರಿದ ವಿಚಾರ
ಎಂಆರ್‌ಪಿಎಲ್‌ನ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್, ಕೈಗಾರಿಕೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ರಾಜ್ಯ ಸರಕಾರಕ್ಕೆ ಸೇರಿದ ವಿಚಾರ ಎಂದರು.
ಹಿರಿಯ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಅವರ ಬದಲಾಗಿ ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯೆಯಾಗಿ ಸ್ಪರ್ಧಿಸುತ್ತಿರುವ ನಿರ್ಮಲಾ ಸೀತಾರಾಮನ್, ತಾನು ಈಗ ಚುನಾವನಾ ಅಭ್ಯರ್ಥಿಯಾಗಿರುವ ಕಾರಣ ಕೆಲವು ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ. ಬಿಜೆಪಿಯು ಸ್ಥಳೀಯರ ಭಾವನೆಗಳನ್ನು ಗೌರವಿಸುವ ಸಂಸ್ಕೃತಿಯನ್ನು ಹೊಂದಿದೆ ಎಂದರು.
ದೇಶದಲ್ಲಿ ಪ್ರಥಮ ಬಾರಿಗೆ ಕೇಂದ್ರ ಸರಕಾರ 59 ವಿವಿಧ ಯೋಜನೆಗಳ ಸಹಾಯಧನವನ್ನು ಜನಧನ ಯೋಜನೆಯ ಮೂಲಕ 61,822 ಕೋಟಿ ರೂ.ನ್ನು ನೇರವಾಗಿ 31 ಕೋಟಿ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಯ ಮೂಲಕ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. ಸ್ವಚ್ಛ ಭಾರತ ಯೋಜನೆಯ ಮೂಲಕ ಎರಡು ವರ್ಷದಲ್ಲಿ 1.92 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 4ಲಕ್ಷ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. 2 ಕೋಟಿ ನಕಲಿ ಪಡಿತರ ಚೀಟಿಯನ್ನು ಪತ್ತೆ ಹಚ್ಚಿದ್ದು, ಸರಕಾರಕ್ಕೆ 36 ಕೋಟಿ ರೂ. ಉಳಿತಾಯವಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹರಿಭಾಯಿ ಪಿ. ಚೌದರಿ, ರಾಜ್ಯ ಬಿಜೆಪಿ ಎಸ್.ಸಿ. ಮೋರ್ಛಾದ ಅಧ್ಯಕ್ಷ ಕಿಶೋರ್ ಕುಮಾರ್ ಗೌತಮ್, ಸಂಸದ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಶಾಸಕ ಗಣೇಶ್ ಕಾರ್ನಿಕ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.