ಜೂ.10ರಂದು ಪರಿಸರ ಕಿರಣ ಸಂಶೋಧನಾ ಕೇಂದ್ರ ಸಮರ್ಪಣೆ
ಮಂಗಳೂರು, ಜೂ.8: ಮಂಗಳೂರು ವಿಶ್ವವಿದ್ಯಾನಿಲಯವು ಅಣುವಿಜ್ಞಾನ ಸಂಶೋಧನಾ ಮಂಡಳಿ (ಬೋರ್ಡ್ ಆಫ್ ರಿಸರ್ಚ್ ಇನ್ ನ್ಯೂಕ್ಲಿಯರ್ ಸೈನ್ಸಸ್) ಮತ್ತು ಬಾಬಾ ಅಣು ವಿಜ್ಞಾನ ಸಂಸ್ಥೆ (ಬಿ.ಎ.ಆರ್.ಸಿ) ಇವುಗಳ ಧನ ಸಹಾಯ ಹಾಗೂ ತಾಂತ್ರಿಕ ಸಹಕಾರದೊಂದಿಗೆ ನಿರ್ಮಿಸಿರುವ ಅತ್ಯಾಧುನಿಕ ಸೆಂಟರ್ ಫಾರ್ ಅಡ್ವಾಸ್ಡ್ ಸ್ಟಡೀಸ್ ಇನ್ ಎನ್ವಿರಾನ್‌ಮೆಂಟಲ್ ರೇಡಿಯೋ ಆ್ಯಕ್ಟಿವಿಟಿ (ಸಿ.ಎ.ಆರ್.ಇ.ಅರ್.) ಎಂಬ ಅತ್ಯಾಧುನಿಕ ಸಂಶೋಧನಾ ಕೇಂದ್ರವನ್ನು ಜೂನ್ 10ರಂದು ದೇಶಕ್ಕೆ ಸಮರ್ಪಿಸಲಾಗುವುದು.
ಆಧುನಿಕ ಸಂಶೋಧನಾ ಕೇಂದ್ರವನ್ನು ಬಾಬಾ ಅಣುವಿಜ್ಞಾನ ಸಂಶೋಧನಾ ಕೇಂದ್ರ ಮುಂಬೈಯ ನಿರ್ದೇಶಕ ಕೆ.ಎನ್. ವ್ಯಾಸ್ ದೇಶಕ್ಕೆ ಸಮರ್ಪಿಸಲಿದ್ದಾರೆ. ಮುಂಬೈಯ ಬಾಬಾ ಅಣುವಿಜ್ಞಾನ ಸಂಶೋಧನಾ ಕೇಂದ್ರ ಪರಿಸರ ಅಧ್ಯಯನದ ವಿಭಾಗದ ಸಹ ನಿರ್ದೇಶಕ ಡಾ. ಕೆ.ಎಸ್. ಪ್ರದೀಪ್ ಕುಮಾರ್ ಸಂಶೋಧನಾ ಕೇಂದ್ರದ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಬಿಡುಗಡೆಗೊಳಿಸಲಿದ್ದಾರೆ.
ಬೆಂಗಳೂರು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಹಾಗೂ ಮೈಕ್ರೋಟ್ರೋನ್ ಕೇಂದ್ರದ ಮಾಜಿ ನಿರ್ದೇಶಕ ಪ್ರೊ.ಕೆ.ಸಿದ್ಧಪ್ಪ ಸಂಶೋಧನಾ ಕೇಂದ್ರದ ಲಾಂಛನವನ್ನು ಅನಾವರಣಗೊಳಿಸುವರು. ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ. ಭೈರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಮರ್ಪಣಾ ಸಮಾರಂಭವು ಜೂ.10ರಂದು ಅಪರಾಹ್ನ ಗಂಟೆ 2:30ಕ್ಕೆ ನೂತನ ಸಂಶೋಧನಾ ಕೇಂದ್ರದಲ್ಲಿ ಮತ್ತು ಸಭಾ ಕಾರ್ಯಕ್ರಮವು 3:30ಕ್ಕೆ ಹಳೆ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಮೂರು ದಶಕಗಳಿಂದ ಪಶ್ಚಿಮ ಕರಾವಳಿಯಲ್ಲಿ ಪರಿಸರ ಕಿರಣದ ಬಗ್ಗೆ ಹಲವಾರು ಸಂಶೋಧನಾ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಈ ಸಂಶೋಧನಾ ಕಾರ್ಯಗಳು ವಿಶ್ವವಿದ್ಯಾನಿಲಯಕ್ಕೆ ದೇಶದಲ್ಲಿಯೇ ವಿಶಿಷ್ಟ ಸ್ಥಾನವನ್ನು ತಂದು ಕೊಟ್ಟಿದೆ. ವಿಶ್ವವಿದ್ಯಾನಿಲಯವು ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಪರಿಸರದಲ್ಲಿ ವಿಕಿರಣದ ಪ್ರಮಾಣವನ್ನು ಕಳೆದ 30 ವರ್ಷಗಳಿಂದ ಅಧ್ಯಯನ ನಡೆಸುತ್ತಿದೆ.
ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಇದರ ಸಂಶೋಧನೆಯು ಕೈಗಾ ಸ್ಥಾವರದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಿಲ್ಲವೆಂದು ಧೃಢೀಕರಿಸಿರುತ್ತದೆ. ಇದರ ಮುಂದುವರಿದ ಭಾಗವಾಗಿ ವಿಶ್ವವಿದ್ಯಾನಿಲಯವು ಇತ್ತೀಚೆಗೆ ಬಿ.ಆರ್.ಎನ್.ಎಸ್. ನ ಸಹಯೋಗದೊಂದಿಗೆ ಕಾರ್ಬನ್-14 (14ಸಿ) ಮತ್ತು ಟ್ರೀಷಿಯಮ್ (3ಎಚ್) ಬಗ್ಗೆ ಸಂಶೋಧನೆಯನ್ನು ಕೈಗೆತ್ತಿಕೊಂಡಿರುತ್ತದೆ. ಅಣುಸ್ಥಾವರದ ಬಗ್ಗೆ ವಿಶ್ವವಿದ್ಯಾನಿಲಯವು ಇಂತಹ ಸಂಶೋಧನೆಯನ್ನು ಕೈಗೊಳ್ಳುತ್ತಿರುವುದು ದೇಶದಲ್ಲಿ ಇದೇ ಮೊದಲ ಬಾರಿಯಾಗಿದೆ.
ಈ ಸಂಶೋಧನೆಗೆ ಬಿ.ಆರ್.ಎನ್.ಎಸ್. 6 ಕೋಟಿ ರೂ. ಧನಸಹಾಯ ನೀಡಿದ್ದು, ನೂತನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯ ಅಲ್ಲದೆ ದೇಶದ ಇತರ ವಿಶ್ವದ್ಯಾನಿಲಯಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳು ಪರಿಸರ ಕಿರಣದ ಬಗ್ಗೆ ಆಧುನಿಕ ಸಂಶೋಧನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಬಹುದಾಗಿದೆ.