×
Ad

ಬಾಲಕಿ ಮೇಲಿನ ಅತ್ಯಾಚಾರ ಸಾಬೀತು: ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ, 2 ಲಕ್ಷ ರೂ. ದಂಡ

Update: 2016-06-08 23:50 IST

ಉಡುಪಿ, ಜೂ.8: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿ ಯಾಗಲು ಕಾರಣನಾದ ಅಪರಾಧಿ ಪ್ರದೀಪ್ ಕೊರಗನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 2,00,000 ರೂ. ದಂಡ ವಿಧಿಸಿ ನಿನ್ನೆ ತೀರ್ಪು ನೀಡಿದೆ.
ಪ್ರಕರಣದ ವಿವರ: ತಾಲೂಕಿನ 38ನೆ ಕಳ್ತೂರು ಗ್ರಾಮದ ಬುಕ್ಕಿಗುಡ್ಡೆಯ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 2010ರ ಮಾರ್ಚ್‌ನಲ್ಲಿ ಆಕೆಯ ನೆರೆಮನೆಯಲ್ಲಿ ವಾಸವಿದ್ದ ಆರೋಪಿ ಪ್ರದೀಪ ಕೊರಗ ಅತ್ಯಾಚಾರ ಎಸಗಿದ್ದನು. ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದರೆ ಕೊಲೆಗೈಯುವುದಾಗಿ ಜೀವಬೆದರಿಕೆ ಹಾಕಿದ್ದ ಎನ್ನಲಾಗಿದೆ. ಬಳಿಕ ತನ್ನ ಅಪ್ರಾಪ್ತ ವಯಸ್ಸಿನ ಮಗಳು ಗರ್ಭಿಣಿಯಾಗಿರುವುದನ್ನು ತಿಳಿದ ಆಕೆಯ ತಾಯಿ ಮಾ.10ರಂದು ಪೊಲೀಸ್ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಕಾರ್ಕಳ ವೃತ್ತ ನಿರೀಕ್ಷಕರು ಆರೋಪಿ ಪ್ರದೀಪ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪಿಯ ದೌರ್ಜನ್ಯದಿಂದ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದಳು ನ್ಯಾಯಾಲಯದ ಆದೇಶದ ಮೇರೆಗೆ ದೌರ್ಜನ್ಯಕ್ಕೊಳಗಾದ ಬಾಲಕಿ, ಮಗು ಹಾಗೂ ಆರೋಪಿತನ ಡಿಎನ್‌ಎ ಪರಿಶೀಲನೆ ನಡೆಸಿದಾಗ ಆರೋಪಿ ದೌರ್ಜನ್ಯ ಎಸಗಿರುವುದು ದೃಢಪಟ್ಟಿತ್ತು. ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ್ ಸಾಕ್ಷಿಗಳ ವಿಚಾರಣೆ ನಡೆಸಿ ವಾದ-ವಿವಾದ ಆಲಿಸಿ ಆರೋಪಿ ವಿರುದ್ಧದ ಆಪಾದನೆ ಸಾಬೀತಾಗಿರುವುದಾಗಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ನ್ಯಾಯಾಲಯ ವಿಧಿಸಿದ 2 ಲಕ್ಷ ರೂ. ದಂಡದಲ್ಲಿ 1,50,000 ರೂ. ಅನ್ನು ಸಂತ್ರಸ್ತ ಬಾಲಕಿಯ ಮಗುವಿಗೆ ಪರಿಹಾರ ರೂಪದಲ್ಲಿ ಹಾಗೂ 50,000 ರೂ.ನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡಬೇಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಪ್ರಕರಣದ ತನಿಖೆಯನ್ನು ಕಾರ್ಕಳ ಠಾಣೆಯ ವೃತ್ತ ನಿರೀಕ್ಷಕರಾಗಿದ್ದ ಪುಟ್ಟಸ್ವಾಮಿ ಗೌಡ ನಡೆಸಿದ್ದರು. ಅಭಿಯೋಜನೆ ಪರ ಸರಕಾರಿ ಅಭಿಯೋಜಕರಾದ ಟಿ.ಎಸ್. ಜಿತೂರಿ ಹಾಗೂ ಬಿ. ಶೇಖರ ಶೆಟ್ಟಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News