ಮ್ಯಾಕ್ ಡೊನಾಲ್ಡ್ ದರೋಡೆಗೆ ಹೋದ ಜೋಡಿಗೆ ಜೀವಮಾನದ ಶಾಕ್

Update: 2016-06-09 08:06 GMT

ಪ್ಯಾರಿಸ್,ಜೂ.9: ಪೂರ್ವ ಫ್ರಾನ್ಸ್‌ನ ಬೆಸಂಕನ್ ಪಟ್ಟಣದಲ್ಲಿರುವ ಮ್ಯಾಕ್ ಡೊನಾಲ್ಡ್ ರೆಸ್ಟೊರೆಂಟಿಗೆ ಇಬ್ಬರು ಸಶಸ್ತ್ರಧಾರಿ ವ್ಯಕ್ತಿಗಳು ನುಗ್ಗಿದಾಗ ಅಲ್ಲಿ ಸುಮಾರು 40 ಮಂದಿ ಆಹಾರ ಸೇವಿಸುತ್ತಿದ್ದುದ್ದನ್ನಷ್ಟೇ ನೋಡಿದ್ದರು. ಆದರೆ ಆ 40 ಮಂದಿಯಲ್ಲಿ 11 ಮಂದಿ ಫ್ರಾನ್ಸಿನ ಪ್ಯಾರಾ ಮಿಲಿಟರಿ ವಿಶೇಷ ಪಡೆಗಳ ಸೈನಿಕರು ಸಾಮಾನ್ಯ ಉಡುಪುಗಳಲ್ಲಿದ್ದರೆಂದು ಆ ಇಬ್ಬರಿಗೆ ಗೊತ್ತೇ ಇರಲಿಲ್ಲ. ಅಂದ ಹಾಗೆ ಈ ಸೈನಿಕರೆಲ್ಲ ತಮ್ಮ ಕರ್ತವ್ಯ ಮುಗಿಸಿ ಬಂದವರಾಗಿದ್ದರಲ್ಲದೆಒತ್ತೆಯಾಳುಗಳನ್ನು ಬಿಡಿಸುವುದರಲ್ಲಿ ನಿಷ್ಣಾತರಾಗಿದ್ದರು.

ಆ ಇಬ್ಬರು ಸಶಸ್ತ್ರಧಾರಿಗಳು ರೆಸ್ಟೋರೆಂಟಿಗೆ ರವಿವಾರ ರಾತ್ರಿ ನುಗ್ಗಿ ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ ಎಲ್ಲರನ್ನೂ ಬೆದರಿಸಿ ಕ್ಯಾಶಿಯರ್ ಪ್ರದೇಶವನ್ನು ಪುಡಿಗಟ್ಟಿ ಅಲ್ಲಿದ್ದ 2,270 ಡಾಲರ್ ಹಣದೊಂದಿಗೆ ಪರಾರಿಯಾಗುತ್ತಿದ್ದಾಗ ಅವರಲ್ಲೊಬ್ಬ ಮುಗ್ಗರಿಸಿ ಬಿದ್ದು ಬಿಟ್ಟಿದ್ದ. ಇದೇ ಸಮಯಕ್ಕೆ ಕಾಯುತ್ತಿದ್ದ ಸೈನಿಕರು ಆತನ ಮೇಲೆರಗಿದರು. ಆತನ ಸಹವರ್ತಿಯನ್ನು ಕೂಡ ಇದೇ ಮಾದರಿಯಲ್ಲಿ ಹಿಡಿಯಲು ಪ್ರಯತ್ನಿಸಿ ಆತನ ಬಂದೂಕನ್ನು ಕೆಳಕ್ಕಿಡಲು ಹೇಳಿದಾಗ ಆತ ನಿರಾಕರಿಸಿ ಬಿಟ್ಟ. ಕೂಡಲೇ ಆತನ ಹೊಟ್ಟೆಗೆ ಗುರಿಯಿಟ್ಟು ಬಂದೂಕು ಚಲಾಯಿಸಿದರು.

ಇಪ್ಪತ್ತರ ಅಸುಪಾಸಿನ ಹರೆಯದ ಇಬ್ಬರು ಯುವಕರನ್ನೂ ಆಸ್ಪತ್ರೆಗೆ ಸೇರಿಸಲಾಯಿತಲ್ಲದೆ ಅವರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.

ರೆಸ್ಟೋರೆಂಟಿನಲ್ಲಿ ಕಳ್ಳರೊಡನೆ ಸೆಣಸಿದ ಸುರಕ್ಷಾ ಪಡೆಯ ಸಿಬ್ಬಂದಿ ಜಿಐಜಿಎನ್ ಅಥವಾ ಗ್ರೂಪ್ ಡಿ ಇಂರ್ಟವೆನ್ಶನ್ ಡಿ ಲ ಜೆಂಡರ್ಮಿರಿ ನ್ಯಾಷನೇಲ್‌ಗೆ ಸೇರಿದವರಾಗಿದ್ದು ಘಟಕವನ್ನು 1972 ರ ಮ್ಯೂನಿಚ್ ಒಲಿಂಪಿಕ್ ಗೇಮ್ಸ್ ಸಂದರ್ಭ ಇಸ್ರೇಲಿ ಕ್ರೀಡಾಳುಗಳನ್ನು ಒತ್ತೆಯಿಟ್ಟು ಅವರ ಹತ್ಯೆಗೈದ ಘಟನೆಯ ನಂತರ ಸ್ಥಾಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News