×
Ad

ಉಳ್ಳಾಲ: ಆಟೊ ಚಾಲಕನಿಗೆ ಬಾಡಿಗೆ ಹಣ ನೀಡದೆ ತಂಡದಿಂದ ಬೆದರಿಕೆ

Update: 2016-06-09 17:10 IST

ಉಳ್ಳಾಲ, ಜೂ. 9: ಮಂಗಳೂರಿನಿಂದ ಬಾಡಿಗೆ ಆಟೋದಲ್ಲಿ ಬಂದ ತಂಡವೊಂದು ಸೋಮೇಶ್ವರ ಬಳಿ ಚಾಲಕನಿಗೆ ಬಾಡಿಗೆ ನೀಡುವ ವಿಷಯದಲ್ಲಿ ಬೆದರಿಕೆಯೊಡ್ದಿರುವ ಘಟನೆ ನಡೆದಿದ್ದು, ಭಿನ್ನಕೋಮಿನವರು ಅಪಹರಿಸಿ ಕೊಲೆಗೆ ಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿಯಿಂದ ಸಾರ್ವಜನಿಕರು ಉಳ್ಳಾಲ ಠಾಣೆಯಲ್ಲಿ ಜಮಾಯಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಘಟನೆಯ ವಿವರ

ಮಂಗಳೂರು ರೈಲು ನಿಲ್ದಾಣದಲ್ಲಿ ಆಟೊ ಚಾಲಕರಾಗಿ ದುಡಿಯುತ್ತಿರುವ ಬಜಾಲ್ ಕಲ್ಲಕಟ್ಟ ನಿವಾಸಿ ಲತೀಫ್(40) ಎಂಬವರಿಗೆ ಬುಧವಾರ ರಾತ್ರಿ 7 ಗಂಟೆಗೆ ವ್ಯಕ್ತಿಯೊರ್ವ ಆಟೋ ಬಾಡಿಗೆಗೆ ಗೊತ್ತು ಮಾಡಿ ತೊಕೊಟ್ಟಿಗೆ ಕರೆದೊಯ್ದಿದ್ದರು. ತೊಕ್ಕೊಟ್ಟು ತಲುಪಿದಾಗ ಇನ್ನೂ ಇಬ್ಬರು ಆಟೋ ಹತ್ತಿದ್ದರು.ಅಲ್ಲಿಂದ ಉಳ್ಳಾಲದ ಬಾರೊಂದಕ್ಕೆ ಆಟೊವನ್ನು ಕೊಂಡೊಯ್ಯುವಂತೆ ತಂಡ ತಿಳಿಸಿದ್ದು, ಲತೀಫ್ ಅವರು ಹೇಳಿದಂತೆ ಅಲ್ಲಿಗೂ ಕರೆದುಕೊಂಡು ಹೋಗಿದ್ದರು. ಬಾರ್ ಒಳಗಿಂದ ತಂಡದ ಓರ್ವ ಬಿಯರ್ ಹಾಗೂ ಇನ್ನಿತರ ಅಮಲು ಪದಾರ್ಥದ ಬಾಟಲ್‌ಗಳನ್ನು ಖರೀದಿಸಿ ಆಟೊ ಹತ್ತಿ ಕುಡಿಯುತ್ತಾ ಸೋಮೇಶ್ವರಕ್ಕೆ ಬಿಡುವಂತೆ ಲತೀಫ್‌ಗೆ ತಿಳಿಸಿದ್ದರು. ಸೋಮೇಶ್ವರ ತಲುಪುತ್ತಿದ್ದಂತೆಯೇ ಲತೀಫ್ ತಂಡದಲ್ಲಿ ಬಾಡಿಗೆ ಕೇಳಿದಾಗ ತಂಡ ನಿಂದಿಸಿ, ಕೊಲೆ ಮಾಡುವ ಬೆದರಿಕೆ ಒಡ್ಡಿದೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ತಂಡದ ವರ್ತನೆಯಿಂದ ಬೆದರಿದ ಲತೀಫ್ ಆಟೋದೊಂದಿಗೆ ಸ್ಥಳದಿಂದ ನಿರ್ಗಮಿಸಿ ಸೋಮೇಶ್ವರ ರೈಲು ನಿಲ್ದಾಣದ ಬಳಿ ಬಂದು ಕುಳಿತಿದ್ದರು. ತಂಡ ಮಾಡುತ್ತಿದ್ದ ವರ್ತನೆಯಿಂದ ಹೆದರಿದ್ದ ಲತೀಫ್ ಮೊದಲೇ ಸಂಬಂಧಿ ಸಿರಾಜ್ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ಉಳ್ಳಾಲ ಠಾಣೆಗೆ ಮೊದಲೇ ದೂರು ನೀಡಲಾಗಿತ್ತು. ಲತೀಫ್‌ರನ್ನು ಸಂಪರ್ಕಿಸುವಂತೆ ಇನ್‌ಸ್ಪೆಕ್ಟರ್ ಸಿರಾಜ್‌ಗೆ ತಿಳಿಸಿದ್ದು, ಸಿರಾಜ್ ಕರೆ ಮಾಡಿದ್ದರೂ ಲತೀಫ್ ಕರೆ ಸ್ವೀಕರಿಸಿರಲಿಲ್ಲ.

ಇನ್‌ಸ್ಪೆಕ್ಟರ್ ಹಲವು ಬಾರಿ ಪ್ರಯತ್ನಿಸಿದ ಬಳಿಕ ಕರೆ ಸ್ವೀಕರಿಸಿದ್ದ ಲತೀಫ್ ತಾನು ಸೋಮೇಶ್ವರ ರೈಲು ನಿಲ್ದಾಣದ ಬಳಿ ಇರುವುದಾಗಿ ತಿಳಿಸಿದ್ದರು. ಭಿನ್ನಕೋಮಿನವರು ಆಟೊ ಚಾಲಕನನ್ನು ಅಪಹರಿಸಿ ಕೊಲೆಗೆ ಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿ ಉಳ್ಳಾಲದ ಜನರಿಗೆ ಸಿಕ್ಕಿ ಠಾಣೆ ಬಳಿ ಜಮಾಯಿಸಿದ್ದರಿಂದ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.

ಆಟೋವನ್ನು ಉಳ್ಳಾಲ ಠಾಣೆಗೆ ತರಲಾಗಿದ್ದು, ದೂರು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News