×
Ad

ಮೂಡುಬಿದಿರೆ: ಅನಧಿಕೃತ ಸ್ಟ್ರೀಟ್‌ಲೈಟ್‌ಗಳ ಸಂಪರ್ಕ ಕಡಿತ

Update: 2016-06-09 19:33 IST

ಮೂಡುಬಿದಿರೆ, ಜೂ.9: ಪಂಚಾಯತ್ ವ್ಯಾಪ್ತಿಗಳಲ್ಲಿರುವ ವಿದ್ಯುತ್ ಕಂಬಗಳಿಗೆ ಅನಧಿಕೃತವಾಗಿ ಅಳವಡಿಸಿರುವ ಸ್ಟ್ರೀಟ್‌ಲೈಟ್‌ಗಳ ಸಂಪರ್ಕವನ್ನು ಕಲ್ಲಮುಂಡ್ಕೂರು ಮೆಸ್ಕಾಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಡಿತಗೊಳಿಸುವ ಮೂಲಕ ಮೆಸ್ಕಾಂಗೆ ಆಗುತ್ತಿದ್ದ ನಷ್ಟವನ್ನು ತಡೆದಿದ್ದಾರೆ.

ಕಲ್ಲಮುಂಡ್ಕೂರು ಟಿ.ಸಿ.ಗೆ ಒಳಪಟ್ಟಿರುವ ಕಲ್ಲಮುಂಡ್ಕೂರು, ತೆಂಕಮಿಜಾರು, ಇರುವೈಲ್ ಹಾಗೂ ಪುತ್ತಿಗೆ ಪಂಚಾಯತ್‌ಗೆ ಒಳಪಟ್ಟಿರುವ ಸ್ಥಳಗಳಲ್ಲಿರುವ ಕೆಲವು ವಿದ್ಯುತ್ ಕಂಬಗಳಿಗೆ ಪಂಚಾಯತ್ ಅನಧಿಕೃತವಾಗಿ ಸ್ಟ್ರೀಟ್‌ಲೈಟ್‌ಗಳನ್ನು ಅಳವಡಿಸಿರುವುದರಿಂದ ಮೆಸ್ಕಾಂಗೆ ನಷ್ಟವಾಗುತ್ತಿತ್ತು. ಇದನ್ನು ಪತ್ತೆ ಹಚ್ಚಿ ರುವ ಮೆಸ್ಕಾಂ ಅಧಿಕಾರಿಗಳು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ಪಂಚಾಯತ್ ವ್ಯಾಪ್ತಿಗಳಲ್ಲಿರುವ ಕೆಲವು ವಿದ್ಯುತ್ ಕಂಬಗಳಲ್ಲಿ ಮೀಟರ್‌ಗಳನ್ನು ಅಳವಡಿಸಿ ಸ್ಟ್ರೀಟ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಒಂದೇ ವಿದ್ಯುತ್ ಕಂಬದಿಂದ ಇನ್ನೊಂದು ಕಂಬಕ್ಕೆ ಅನಧಿಕೃತವಾಗಿ ಸಂಪರ್ಕವನ್ನು ತೆಗೆದುಕೊಳ್ಳಲಾಗಿದೆ. ಹೀಗೆ ಕಲ್ಲಮುಂಡ್ಕೂರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 30ರಷ್ಟು, ತೆಂಕಮಿಜಾರು ಪಂಚಾಯತ್ ವ್ಯಾಪ್ತಿಯಲ್ಲಿ 5, ಪುತ್ತಿಗೆ, ಹೊಸಬೆಟ್ಟು ಹಾಗೂ ಇರುವೈಲ್ ವ್ಯಾಪ್ತಿಗಳಲ್ಲಿಯೂ ಹಲವು ಸ್ಟ್ರೀಟ್‌ಲೈಟ್‌ಗಳಿಗೆ ಅನಧಿಕೃತವಾಗಿ ಸಂಪರ್ಕವನ್ನು ಅಳವಡಿಸಲಾಗಿದೆ. ಇದನ್ನು ಪತ್ತೆ ಹಚ್ಚಿರುವ ಇಲಾಖೆಯ ಪತ್ತೆ ದಳವು ಸ್ಟ್ರೀಟ್‌ಲೈಟ್‌ನ ಅನಧಿಕೃತ ಸಂಪರ್ಕವನ್ನು ಕಡಿತಗೊಳಿಸಿದ್ದು ಇಲಾಖೆಗೆ ಆಗುತ್ತಿದ್ದ ಭಾರೀ ನಷ್ಟದಿಂದ ಪಾರು ಮಾಡಿದೆ.

ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಸ್ಟ್ರೀಟ್‌ಲೈಟ್‌ಗಳ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಕೆಲವು ಕಡೆ ಅಗತ್ಯವಿಲ್ಲದ ಅರಣ್ಯ ಪ್ರದೇಶ ವ್ಯಾಪ್ತಿಗಳಲ್ಲಿ ಅಳವಡಿಸಿರುವ ಸ್ಟ್ರೀಟ್‌ಲೈಟ್‌ಗಳ ಸಂಪರ್ಕವನ್ನೂ ತೆಗೆಯಲಾಗಿದೆ. ಹಾಗೂ ಇಲಾಖೆಯು ಅಧಿಕೃತವಾಗಿ ಅಳವಡಿಸಿರುವ ಮೀಟರ್‌ನಿಂದ ಕೆಲವು ಕಡೆ ಅನಧಿಕೃವಾಗಿ ಸಂಪರ್ಕವನ್ನು ಪಂಚಾಯತ್ ತೆಗೆದುಕೊಂಡಿದ್ದು ಅವುಗಳನ್ನೆಲ್ಲಾ ಪತ್ತೆ ಹಚ್ಚಿ ಕಡಿತಗೊಳಿಸಿ ಮೆಸ್ಕಾಂಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲಾಗಿದೆ.

- ನವೀನ್, ಕಲ್ಲಮುಂಡ್ಕೂರು ಮೆಸ್ಕಾಂ ಇಲಾಖಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News