×
Ad

ಪೂಜಾರಿ ವಿರುದ್ಧ ಮಾನಹಾನಿಕರ ಟೀಕೆ: ಹೇಮನಾಥ ಶೆಟ್ಟಿ ವಿರುದ್ಧ ಕ್ರಮಕ್ಕೆ ಆಗ್ರಹ

Update: 2016-06-09 21:05 IST

ಮಂಗಳೂರು,ಜೂ.9: ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಬಿ.ಜನಾರ್ದನ ಪೂಜಾರಿಯವರ ಘನತೆಗೆ ಧಕ್ಕೆಯಾಗುವ ರೀತಿಯಲ್ಲಿ ಮಾನಹಾನಿಕರವಾಗಿ ಟೀಕಿಸಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿಯವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಮಾಜಿ ವಕ್ತಾರ ಕಳ್ಳಿಗೆ ತಾರನಾಥ ಶೆಟ್ಟಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷದ ಹಿರಿಯ ನಾಯಕರಾದ ಜನಾರ್ದನ ಪೂಜಾರಿಯವರ ಸಹಾಯ ಪಡೆದು ರಾಜಕೀಯವಾಗಿ ಬೆಳೆದಿರುವ ಪುತ್ತೂರಿನ ಹೇಮನಾಥ ಶೆಟ್ಟಿ ಈಗ ಅವರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹೇಮನಾಥ ಶೆಟ್ಟಿಯವರ ತಂದೆ ಅಂತಪ್ಪ ಶೆಟ್ಟಿ ಕಾಂಗ್ರೆಸ್ ಮುಖಂಡರಾಗಿ ಕಾರ್ಯನಿರ್ವಹಿಸಿದವರು. ಹೇಮನಾಥ ಶೆಟ್ಟಿ ಪುತ್ತೂರಿನ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಡಿ.ವಿ.ಸದಾನಂದ ಗೌಡರ ಜೊತೆ ಸೇರಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಸೋಲಿಗೆ ಕಾರಣರಾದವರು.

ಬಳಿಕ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಬೊಂಡಾಲ ಜಗನ್ನಾಥ ಶೆಟ್ಟಿ ಸೋಲಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿಯವರನ್ನು ಪರಾಭವಗೊಳಿಸಲು ಪ್ರಯತ್ನಿಸಿದ್ದಾರೆ. ಈ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಹೇಮನಾಥ ಶೆಟ್ಟಿಗೆ ಜನಾರ್ದನ ಪೂಜಾರಿಯವರ ವಿರುದ್ಧ ಟೀಕೆ ಮಾಡುವ ನೈತಿಕತೆ ಇಲ್ಲ. ಹೇಮನಾಥ ಶೆಟ್ಟಿ ಇದೇ ರೀತಿಯ ಚಟುವಟಿಕೆಯನ್ನು ತೋರಿದರೆ ನಾವು ಪ್ರತಿ ಹೋರಾಟವನ್ನು ಮಾಡಬೇಕಾದೀತು. ಪೂಜಾರಿಯವರ ವಿರುದ್ಧ ಕರಿಪತಾಕೆ ಹಾರಿಸುತ್ತೇವೆ ಎಂದವರು ತಾಕತ್ತಿದ್ದರೆ ಅದನ್ನು ಮಾಡಿ ತೋರಿಸಲಿ ಎಂದು ಕಳ್ಳಿಗೆ ತಾರನಾಥ ಶೆಟ್ಟಿ ಸವಾಲೆಸೆದರು.

ಹೇಮನಾಥ ಶೆಟ್ಟಿಯವರ ಪತ್ನಿ ಅನಿತಾ ಹೇಮನಾಥ ಶೆಟ್ಟಿಯವರು ಜಿಲ್ಲಾ ಪಂಚಾಯತ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಅವರ ಪರವಾಗಿ ಮತಯಾಚನೆಗಾಗಿ ಪಾದಯಾತ್ರೆ ನಡೆಸಿದ್ದಾರೆ. ಹೇಮನಾಥ ಶೆಟ್ಟಿಯವರು ಜನಾರ್ದನ ಪೂಜಾರಿಯವರ ಪಕ್ಷ ನಿಷ್ಠೆ, ಬಡವರ ಬಗೆಗಿನ ಕಾಳಜಿ, ರಾಜ್ಯದ ಜನತೆಯ ಕಷ್ಟ ನಷ್ಟಗಳಿಗೆ ಸದಾ ಸ್ಪಂದಿಸುತ್ತಾ ರಾಜ್ಯದಲ್ಲಿರುವ ಮುಖ್ಯಮಂತ್ರಿಯವರಿಗೆ ಸದಾ ಸಲಹೆ ಸೂಚನೆಗಳನ್ನು ಬಹಿರಂಗವಾಗಿ ಕೊಡುತ್ತಿದ್ದಾರೆ.

ಸರಕಾರದ ತಪ್ಪು ಹೆಜ್ಜೆಗಳನ್ನು ತಿದ್ದುವ ಕೆಲಸವನ್ನು ಓರ್ವ ಪ್ರಬುದ್ಧ ರಾಜಕಾರಣಿಯಾಗಿ ನಿರ್ವಹಿಸುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಮಾರ್ಗದರ್ಶಕ ಜನಾರ್ದನ ಪೂಜಾರಿಯವರ ಕಾಳಜಿಯನ್ನು ಅರ್ಥಮಾಡಿಕೊಳ್ಳದೆ ಮಾತನಾಡುತ್ತಿರುವ ಪಕ್ಷದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮನಾಥ ಶೆಟ್ಟಿಯನ್ನು ಪಕ್ಷದಿಂದ ಕೈಬಿಡ ಬೇಕು ಎಂದು ಕಳ್ಳಿಗೆ ತಾರನಾಥ ಶೆಟ್ಟಿ ಆಗ್ರಹಿಸಿದರು.

ಹೇಮನಾಥ ಶೆಟ್ಟಿ ಜನಾರ್ದನ ಪೂಜಾರಿಯವರ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಿದ್ದರೆ ಅವರ ಜೊತೆ ನಿಯೋಗದಲ್ಲಿದ್ದವರ ಹೆಸರು ಬಹಿರಂಗಪಡಿಸಲಿ ಎಂದು ಕಳ್ಳಿಗೆ ತಾರನಾಥ ಶೆಟ್ಟಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಮೇಯರ್ ಮಹಾಬಲ ಮಾರ್ಲ, ಪುರಂದರ ದಾಸ್ ಕೂಳೂರು, ಗುಲ್ಜಾರ್ ಬಾನು,ಮನಪಾ ಸದಸ್ಯೆ ಅಪ್ಪಿ, ದೀಪಕ್, ರಾಧಾಕೃಷ್ಣ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ,ಅರುಣ್ ಕುವೆಲ್ಲೂ, ಉಮೇಶ್ಚಂದ್ರ, ಕಮಲಾಕ್ಷ ಸಾಲ್ಯಾನ್, ಮೋಹನ್ ಶೆಟ್ಟಿ, ರಮಾನಂದ, ಕೃಷ್ಣ ಕೋಟ್ಯಾನ್, ರಾಜೇಶ್ ಬೆಂಗ್ರೆ, ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News