ನನ್ನ ತವರೂರಿನಲ್ಲಿ ಆರೆಸ್ಸೆಸ್‌ನಿಂದ ಹಿಂಸಾಚಾರ:ಕೇರಳ ಮುಖ್ಯಮಂತ್ರಿ
ತಿರುವನಂತಪುರ,ಜೂ.9: ತನ್ನ ತವರೂರು,ಕಣ್ಣೂರು ಜಿಲ್ಲೆಯ ಪಿಣರಾಯಿಯಲ್ಲಿ ಆರೆಸ್ಸೆಸ್ ಹಿಂಸಾಚಾರದಲ್ಲಿ ತೊಡಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಇಲ್ಲಿ ಆರೋಪಿಸಿದರು. ಇದೇ ವೇಳೆ ಬಿಜೆಪಿಯು ಮುಖ್ಯಮಂತ್ರಿಗಳು ‘ರಾಜಕೀಯ ಹಿಂಸಾಚಾರ ’ವನ್ನು ಮುಚ್ಚಿಹಾಕಲು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಪ್ರತ್ಯಾರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ,ಆರೆಸ್ಸೆಸ್ ಕಾರ್ಯಕರ್ತರು ಈಗ ತನ್ನ ತವರೂರಿನ ಮೇಲೆ ಗಮನ ಹರಿಸಿದ್ದಾರೆ ಮತ್ತು ಪಿಣರಾಯಿಯಲ್ಲಿ ಸಾಮಾನ್ಯ ಜೀವನ ನಡೆಸುವುದು ಕಷ್ಟ ಎಂಬ ಸುಳ್ಳುಭಾವನೆಯನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು. ಚುನಾವಣಾ ಫಲಿತಾಂಶಗಳು ಪ್ರಕಟಗೊಂಡ ಬೆನ್ನಿಗೇ ಆರೆಸ್ಸೆಸ್ ಹಿಂಸಾಚಾರಕ್ಕಿಳಿದಿತ್ತು ಎಂದು ಅವರು ಆರೋಪಿಸಿದರು.
ಆರೆಸ್ಸೆಸ್ ಕಾರ್ಯಕರ್ತರು ಸುಳ್ಳು ಪ್ರಚಾರದಲ್ಲಿ ನಿಸ್ಸೀಮರಾಗಿದ್ದಾರೆ ಮತ್ತು ಕೋಮು ಹಿಂಸಾಚಾರ ಹುಟ್ಟು ಹಾಕುವುದು ಅವರ ನಿಜವಾದ ಗುರಿಯಾಗಿದೆ ಎಂದ ಅವರು, ದೇಶದಲ್ಲಿ ಕೋಮು ಹಿಂಸೆ ತಲೆಯೆತ್ತಿದಾಗೆಲ್ಲ ಅದರ ಹಿಂದೆ ಆರೆಸ್ಸೆಸ್‌ನ ಸುಳ್ಳು ಪ್ರಚಾರವಿರುತ್ತದೆ ಎಂದರು.
ತನ್ಮಧ್ಯೆ ಬಿಜೆಪಿಯ ರಾಜ್ಯ ಕಾರ್ಯದರ್ಶಿ ಎಂ.ಟಿ.ರಮೇಶ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿ,ತನ್ನ ತವರು ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರವನ್ನು ಮುಚ್ಚಿ ಹಾಕಲು ಪಿಣರಾಯಿ ಸುಳ್ಳುಗಳನ್ನು ಹರಡುತ್ತಿದ್ದಾರೆ. ಅವರ ಹೇಳಿಕೆಗಳು ಅವರು ಹೊಂದಿರುವ ಹುದ್ದೆಗೆ ಉಚಿತವಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರಿಗೂ ನ್ಯಾಯ ದೊರೆಯುವಂತೆ ನೋಡಿಕೊಳ್ಳುವ ನೈತಿಕ ಹೊಣೆಗಾರಿಕೆಯನ್ನು ಅವರು ಹೊಂದಿದ್ದಾರೆ ಎಂದರು.