×
Ad

ಜೂ.12ರಂದು ಬಿಎಸ್ಸೆನ್ನೆಲ್ ಪಿಂಚಣಿದಾರರ ಸಂಘದ ಸಮ್ಮೇಳನ

Update: 2016-06-09 23:00 IST

ಪುತ್ತೂರು, ಜೂ.9: ಅಖಿಲ ಭಾರತ ಬಿಎಸ್ಸೆನ್ನೆಲ್ ಮತ್ತು ಡಿಒಟಿ ಪಿಂಚಣಿದಾರರ ಸಂಘದ ಪುತ್ತೂರು ವಿಭಾಗ ಸಮ್ಮೇಳನವು ಜೂ.12ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಲಿದೆ ಎಂದು ಸಂಘದ ಅವಿಭಜಿತ ಜಿಲ್ಲಾ ಘಟಕದ ಅಧ್ಯಕ್ಷ ವಿ.ಚಂದ್ರಶೇಖರ ತಿಳಿಸಿದ್ದಾರೆ.

ಗುರುವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವು ಜೂ.12ರಂದು ಪೂರ್ವಾಹ್ನ ನಡೆಯಲಿದೆ. ಈ ಸಂದರ್ಭದಲ್ಲಿ 2001ರಿಂದ ಮೊದಲು ನಿವೃತ್ತರಾದ ನೌಕರರನ್ನು ಸನ್ಮಾನಿಸಿ ಗೌರವಿಸಲಾಗುವುದು. ಕರ್ನಾಟಕ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಬಿ. ಪುರಂದರ ಭಟ್ ನಿವೃತ್ತರ ವಿವರಗಳುಳ್ಳ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಿದ್ದಾರೆ. ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯ ಡಾ. ಎ.ಪಿ.ಭಟ್ ವೃದ್ಧಾಪ್ಯದಲ್ಲಿ ಬರುವ ಕಾಯಿಲೆಗಳು ಮತ್ತು ನಿವಾರಣೋಪಾಯಗಳ ಕುರಿತು ಮಾಹಿತಿ ನೀಡಲಿದ್ದಾರೆ. ಸಂಘದ ಕರ್ನಾಟಕ ರಾಜ್ಯ ವಲಯ ಅಧ್ಯಕ್ಷ ಮೋನಪ್ಪ ಪೂಜಾರಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಪಿಂಚಣಿದಾರರಿಗೆ ತಾರತಮ್ಯ ನೀತಿ ಮಾಡಲಾಗುತ್ತಿದ್ದು ಇದನ್ನು ಸರಿಪಡಿಸಬೇಕು. ವೈದ್ಯಕೀಯ ಭತ್ಯೆ ನೀಡಬೇಕು. ವೈದ್ಯಕೀಯ ಬಿಲ್ಲುಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಿ ಸಂಪೂರ್ಣವಾಗಿ ಪಾವತಿಸಬೇಕು. 7ನೆ ವೇತನ ಆಯೋಗದಲ್ಲಿ ಪಿಂಚಣಿದಾರರಿಗೂ ಸರಿಯಾದ ಪಿಂಚಣಿ ಸಿಗಬೇಕು ಎಂಬ ಬೇಡಿಕೆಯನ್ನು ಸರಕಾರಕ್ಕೆ ಮಂಡಿಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಟಿ. ರಾಘವೇಂದ್ರ ರಾವ್, ಕೆ. ಗೋಪಾಲಕೃಷ್ಣ ನಾಯಕ್, ಶಂಕರಿ, ಪುತ್ತೂರು ತಾಲೂಕು ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News