ಭಾರತದಲ್ಲಿ ಮಾನವ ಹಕ್ಕುಗಳು,ಧಾರ್ಮಿಕ ಸ್ವಾತಂತ್ರ ಹದಗೆಡುತ್ತಿವೆ: ಅಮೆರಿಕದ ಸಂಸ್ಥೆ
ವಾಷಿಂಗ್ಟನ್,ಜೂ.9: ಮೋದಿ ಸರಕಾರದ ಎರಡು ವರ್ಷಗಳ ಆಡಳಿತದಲ್ಲಿ ಭಾರತದಲ್ಲಿ ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ ದುರವಸ್ಥೆಗೀಡಾಗಿವೆ ಎಂದು ಹೇಳಿರುವ ಅಮೆರಿಕದ ಮಾನವ ಹಕ್ಕುಗಳ ಕಾರ್ಯಕರ್ತರು, ಈ ವಿಷಯವು ಅಮೆರಿಕ-ಭಾರತ ನಡುವಿನ ಮಾತುಕತೆಗಳ ಭಾಗವಾಗಬೇಕು ಎಂದು ಕರೆ ನೀಡಿದ್ದಾರೆ.
ಎಲ್ಲ ಪ್ರಜೆಗಳಿಗೂ ನ್ಯಾಯ ಮತ್ತು ಉತ್ತರದಾಯಿತ್ವದ ಭರವಸೆ,ದುರ್ಬಲ ಸಮುದಾಯಗಳ ರಕ್ಷಣೆ ಮತ್ತು ವಿಚಾರಗಳು ಹಾಗೂ ಭಿನ್ನಾಭಿಪ್ರಾಯಗಳ ಮುಕ್ತ ವಿನಿಮಯದ ರಕ್ಷಣೆಗೆ ಮೋದಿ ಸರಕಾರವು ಉತ್ತಮ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಭಾರತದಲ್ಲಿ ಮಾನವ ಹಕ್ಕುಗಳ ಕುರಿತಂತೆ ಪ್ರಗತಿಯು ಕುಂಠಿತಗೊಳ್ಳಲಿದೆ ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಏಷ್ಯಾ ವಿಭಾಗದ ನಿರ್ದೇಶಕ ಜಾನ್ ಸಿಫ್ಟನ್ ಹೇಳಿದರು.
ಭಾರತದಲ್ಲಿ ಮಾನವ ಹಕ್ಕುಗಳ ಕುರಿತು ಟಾಮ್ ಲಾಂಟೋಸ್ ಮಾನವ ಹಕ್ಕುಗಳ ಆಯೋಗವು ಏರ್ಪಡಿಸಿದ್ದ ಕಾಂಗ್ರೆಸ್ ವಿಚಾರಣೆಯಲ್ಲಿ ಮಾತನಾಡಿದ ಅವರು, ಕಾನೂನುಗಳು ಮತ್ತು ನೀತಿಗಳ ಪರಿಣಾಮಕಾರಿ ಅನುಷ್ಠಾನದ ಕೊರತೆಯು ನಿರಂತರ ಸವಾಲಾಗಿದೆ ಎಂದರು. ಭಾರತ ಸರಕಾರದೊಡನೆ ಈ ವಿಷಯಗಳನ್ನು ಆದ್ಯತೆಯೊಂದಿಗೆ ಕೈಗೆತ್ತಿಕೊಳ್ಳುವಂತೆ ಮತ್ತು ಭಾರತ ಸರಕಾರದೊಂದಿಗೆ ಮಾತುಕತೆಯಲ್ಲಿ ನೇರವಾಗಿ ಪ್ರಸ್ತಾಪಿಸುವಂತೆ ಅಮೆರಿಕ ಸರಕಾರದ ಮೇಲೆ ಒತ್ತಡ ಹೇರುವಂತೆ ಕಾಂಗ್ರೆಸ್ ಸದಸ್ಯರನ್ನು ಅವರು ಆಗ್ರಹಿಸಿದರು.
ಈ ಅಪರಾಧಗಳಲ್ಲಿ ಭಾರತ ಸರಕಾರವು ನೇರವಾಗಿ ಭಾಗಿಯಾಗಿಲ್ಲವಾದರೂ ಪ್ರಧಾನಿ ಮೋದಿ ಮತ್ತು ಸರಕಾರಿ ಅಧಿಕಾರಿಗಳು ಗಾಢವೌನ ವಹಿಸಿದ್ದಾರೆ ಎಂದು ಇಂಟರ್‌ನ್ಯಾಷನಲ್ ಕ್ರಿಶ್ಚಿಯನ್ ಕನ್ಸರ್ನ್‌ನ ಅಧ್ಯಕ್ಷ ಜೆಫ್ ಕಿಂಗ್ ಹೇಳಿದರೆ,ವ್ಯೆಹಾತ್ಮಕ ಮತ್ತು ವಾಣಿಜ್ಯ ಮಾತುಕತೆಗಳು ಭದ್ರತೆ,ರಕ್ಷಣೆ,ಆರ್ಥಿಕ ಸಹಕಾರ ಇತ್ಯಾದಿಗಳಾಚೆಗೂ ಸಾಗಬೇಕು ಮತ್ತು ಉಭಯ ರಾಷ್ಟ್ರಗಳು ಪ್ರಜಾಪ್ರಭುತ್ವ,ಧಾರ್ಮಿಕ ಸ್ವಾತಂತ್ರ ಮತ್ತು ಕಾನೂನಿನ ಆಡಳಿತದ ವೌಲ್ಯಗಳನ್ನು ಹಂಚಿಕೊಂಡು ಸಮಾಜ ನಿರ್ಮಾಣ ಮಾಡುವಂತಾಗಬೇಕು ಎಂದು ಭಾರತೀಯ ಅಮೆರಿಕನ್ ಮುಸ್ಲಿಮ್ ಮಂಡಳಿಯ ಮುಸಾದಿಕ್ ಥಂಗೆ ಹೇಳಿದರು.