ಪಕ್ಷಕ್ಕಾಗಿ ಪೆಟ್ಟು ತಿಂದು ಬದುಕುಳಿದವ ನಾನು: ಹರಿನಾಥ್
ಮಂಗಳೂರು, ಜೂ.10: ಮುಖ್ಯಮಂತ್ರಿ ಬಳಿ ನಾವು ಯಾರದ್ದೇ ಬಗ್ಗೆ ದೂರು ನೀಡಲು ಹೋಗಿಲ್ಲ. ಆ ಆರೋಪ ಸಂಪೂರ್ಣ ಸುಳ್ಳು. ಯಾರ ವಿರುದ್ಧವೂ ಮಾತನಾಡುವುದಿದ್ದರೆ ಅಲ್ಲಿಗೆಲ್ಲಾ ಹೋಗಬೇಕಾಗಿಲ್ಲ. ಮುಖ್ಯಮಂತ್ರಿ ಬಳಿ ನಗರದ ಅಭಿವೃದ್ಧಿ ಕುರಿತಂತೆ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಹೋಗಿರುವುದೇ ವಿನಹ ಬೇರೆ ಉದ್ದೇಶವಿಲ್ಲ ಎಂದು ತಮ್ಮ ಮೇಲಿನ ಆರೋಪದ ಬಗ್ಗೆ ಮೇಯರ್ ಹರಿನಾಥ್ ಸ್ಪಷ್ಟನೆ ನೀಡಿದ್ದಾರೆ.
ನಾನು ಪಕ್ಷದ ಶಿಸ್ತಿನ ಸಿಪಾಯಿ. 1974ರಿಂದಲೇ ಪಕ್ಷದಲ್ಲಿದ್ದೇನೆ. 1977ರಲ್ಲಿ ಪಕ್ಷಕ್ಕಾಗಿ ಪೆಟ್ಟು ತಿಂದು ರಕ್ತ ಹರಿಸಿಕೊಂಡು ಬದುಕುಳಿದವ ನಾನು. ಅಂಥದರಲ್ಲಿ ಬೇರೆಯವರ ಬಗ್ಗೆ ದೂರುವುದಿದ್ದರೆ ನೇರವಾಗಿ ಮಾತನಾಡುವ ಮನುಷ್ಯ ನಾನು. ಅಲ್ಲಿ ಹೋಗಿ ದೂರುವ ಪ್ರಮೇಯವೇ ಇಲ್ಲ ಎಂದು ಮೇಯರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಜತೆ ನಗರದ 9/11 ಸಮಸ್ಯೆ, 94 ಸಿಸಿ ಬಗ್ಗೆ ನಗರದಲ್ಲಿ ಸಮಿತಿ ರಚನೆ, ಲೇಡಿಗೋಶನ್ ಆಸ್ಪತ್ರೆಗೆ ಹೆಚ್ಚುವರಿ 10 ಕೋಟಿ ರೂ. ಹಣ ಬಿಡುಗಡೆ ಹಾಗೂ ಪಶ್ಚಿಮ ವಾಹಿನಿ ಕುರಿತು ಚರ್ಚಿಸಲಾಗಿದೆ. ಹಾಗಾಗಿ ನನ್ನ ವಿರುದ್ಧ ವಿನಾ ಕಾರಣ ಆರೋಪ ಮಾಡಿರುವ ಬಗ್ಗೆ ಬೇಸರವಿದೆ. ಅವರು ಏನೇ ಜಾಲಾಡಿದರೂ ನಾವೂ ಜಾಲಾಡುತ್ತೇವೆ ಎಂದು ಮೇಯರ್ ಹರಿನಾಥ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹಾತ್ವಾಕಾಂಕ್ಷೆಯ ಪಶ್ಚಿಮ ವಾಹಿನಿ ಯೋಜನೆ ಕುರಿತಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಸಕರನ್ನು ಕರೆದು ಸಭೆ ನಡೆಸುವುದಾಗಿ ಮುಖ್ಯಮಂತ್ರಿಯವರು ತಮ್ಮ ಭೇಟಿಯ ಸಂದರ್ಭ ಆಶ್ವಾಸನೆ ನೀಡಿದ್ದಾರೆ ಎಂದು ಮೇಯರ್ ಹರಿನಾಥ್ ಹೇಳಿದರು.