ಸುಳ್ಯ: ರಬ್ಬರ್ ಬೆಳೆಗಾರರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಸಚಿವೆಗೆ ಬಿಜೆಪಿ ಮನವಿ
ಸುಳ್ಯ, ಜೂ.10: ರಬ್ಬರ್ ಧಾರಣೆ ಕಳೆದ 2 ವರ್ಷಗಳಿಂದ ಕುಸಿತವಾಗಿದ್ದು ರಬ್ಬರ್ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಂ ಅವರಿಗೆ ಮನವಿ ಮಾಡಿದೆ.
ರಬ್ಬರ್ ಧಾರಣೆ ಕಳೆದ 2 ವರ್ಷಗಳಿಂದ ಕುಸಿತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ರಬ್ಬರ್ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಈ ನಿಟ್ಟಿನಲ್ಲಿ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರಕಾರ ಮುಂದಾಗಬೇಕಾಗಿದೆ. ರಾಜ್ಯದಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಕೃಷಿ ಬೆಳೆಯಲಾಗುತ್ತಿದ್ದು ದಕ್ಷಿಣ ಕನ್ನಡ ಸೇರಿದಂತೆ ಆಸುಪಾಸಿನ ಸುಮಾರು 6 ಜಿಲ್ಲೆಗಳು ರಬ್ಬರ್ ಆರ್ಥಿಕತೆಯ ಮೇಲೆ ನಿಂತಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಕೃಷಿಕರು ರಬ್ಬರ್ ಕೃಷಿಯನ್ನು ನಂಬಿದ್ದಾರೆ.
ಕಳೆದ ವರ್ಷಗಳಲ್ಲಿ 170 ರಿಂದ 240 ರೂ.ವರಗೆ ಇದ್ದ ಧಾರಣೆ ಈಗ 110 ರಿಂದ 130 ವರೆಗೆ ಕುಸಿದಿದೆ. ಅದರೊಂದಿಗೆ ಖರ್ಚುಗಳು ಹೆಚ್ಚಾಗುತ್ತಿದ್ದು ಕೃಷಿಕರು ಸಂಕಷ್ಟದಲ್ಲಿದ್ದಾರೆ.ಹೀಗಾಗಿ ತಕ್ಷಣವೇ ಕೃಷಿಕರ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಬೇಕು. ಇದಕ್ಕಾಗಿ ರಬ್ಬರ್ ಆಮದು ನಿಷೇದ, ಆಮದು ಸುಂಕ ಏರಿಕೆ, ರಬ್ಬರ್ ಕೃಷಿಗೂ ಬೆಂಬಲ ಬೆಲೆ ಘೋಷಿಸಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಒತ್ತಾಯಿಸಿದೆ.
ಈ ಸಂದರ್ಭ ಸುಳ್ಯ ಶಾಸಕ ಎಸ್. ಅಂಗಾರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಮುಳಿಯ ಕೇಶವ ಭಟ್,ಮಾಜಿ ಎಂಎಲ್‌ಸಿ ಮೋನಪ್ಪ ಭಂಡಾರಿ, ಜಿಪಂ ಸದಸ್ಯರುಗಳಾದ ಆಶಾ ತಿಮ್ಮಪ್ಪ, ಪುಷ್ಪಾವತಿ ಬಾಳಿಲ, ಬಿಜೆಪಿ ಮುಖಂಡ ಪಿ.ಜಿ.ಎಸ್.ಎನ್. ಪ್ರಸಾದ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿಪಂ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದರು.