×
Ad

ದೇಶದ ಅತ್ಯಾಧುನಿಕ ಪರಿಸರ ವಿಕಿರಣ ಸಂಶೋಧನಾ ಕೇಂದ್ರ ಲೋಕಾರ್ಪಣೆ

Update: 2016-06-10 21:20 IST

ಮಂಗಳೂರು, ಜೂ.10: ದೇಶದ ಇತರ ಕಡೆಗಳಲ್ಲೂ ಸ್ವತಂತ್ರ ಪರಿಸರ ವಿಕಿರಣ ಸಂಶೋಧನಾ ಕೇಂದ್ರ ಸ್ಥಾಪನೆಯ ಅಗತ್ಯವಿದೆ ಎಂದು ಮುಂಬೈನ ಬಾಬಾ ಅಣು ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕ ಕೆ.ಎನ್.ವ್ಯಾಸ್ ತಿಳಿಸಿದ್ದಾರೆ.

ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಪರಮಾಣು ಶಕ್ತಿ ಇಲಾಖೆ, ಪರಮಾಣು ವಿಜ್ಞಾನ ಸಂಶೋಧನಾ ಮಂಡಳಿ, ಬಾಬಾ ಅಣು ವಿಜ್ಞಾನ ಸಂಶೋಧನಾ ಕೇಂದ್ರ, ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಇದರ ಸಹಕಾರದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಿರ್ಮಾಣಗೊಂಡ ಆಧುನಿಕ ಪರಿಸರ ವಿಕಿರಣ ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಕಿರಣ ಸಂಶೋಧನಾ ಕೇಂದ್ರ ಅತ್ಯಾಧುನಿಕ ಸಲಕರಣಗಳೊಂದಿಗೆ ಸ್ಥಾಪನೆಯಾಗಿರುವ ಸ್ವತಂತ್ರ ಪರಿಸರ ವಿಕರಣ ಅಧ್ಯಯನ ಕೇಂದ್ರವಾಗಿದ್ದು, ಬಾಬಾ ಅಣು ಸಂಶೋಧನಾ ಕೇಂದ್ರದ ಉಪಕರಣಗಳು ಹಳೆಯದಾಗಿದ್ದು, ಮಂಗಳೂರು ಕೇಂದ್ರದಲ್ಲಿ ಅತ್ಯಾಧುನಿಕ ಸಲರಕರಣೆಗಳ ಅಳವಡಿಕೆಯಿಂದ ಅತ್ಯುತ್ತಮ ಕೇಂದ್ರವಾಗಿ ರೂಪುಗೊಂಡಿದೆ.

ಇದರಿಂದ ಮಂಗಳೂರು ವಿಶ್ವ ವಿದ್ಯಾನಿಲಯ ಪ್ರಪಂಚದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳ ರೀತಿಯ ಸೌಲಭ್ಯವನ್ನು ಹೊಂದಿದಂತಾಗಿದೆ . ಪ್ರಪಂಚದಲ್ಲಿ ವಿವಿಧ ಅಣು ಸ್ಥಾವರಗಳು ಇರುವ ಕಡೆಗಳಲ್ಲಿ ಇಂತಹ ಕೇಂದ್ರಗಳಿವೆ. ಮಂಗಳೂರು ದಕ್ಷಿಣ ಭಾರತದಲ್ಲಿರುವ ಕಾರಣ ದೇಶದ ಪೂರ್ವಭಾಗದಲ್ಲೂ ಇಂತಹ ಸ್ವತಂತ್ರ ಸಂಶೋಧನೆ ನಡೆಸುವ ಕೇಂದ್ರದ ಅಗತ್ಯವಿದೆ ಎಂದು ಕೆ.ಎನ್.ವ್ಯಾಸ್ ತಿಳಿಸಿದರು.

ಅಂತಾರಾಷ್ಟ್ರೀಯ ಅಣು ಶಕ್ತಿ ನಿಯಂತ್ರಣ ಕೇಂದ್ರದ ಮಾನ್ಯತೆ

ಮಂಗಳೂರು ಪರಿಸರ ವಿಕಿರಣ ಸಂಶೋಧನಾ ಕೇಂದ್ರ ವಿಯೆಟ್ನಾಂನಲ್ಲಿರುವ ಅಂತಾರಾಷ್ಟ್ರೀಯ ಅಣುಶಕ್ತಿ ನಿಯಂತ್ರಣ ಕೇಂದ್ರದ ಮಾನ್ಯತೆ ಪಡೆದಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯದ ಕುಲಪತಿ ಕೆ.ಭೈರಪ್ಪ ತಿಳಿಸಿದರು.

ಇದರಿಂದಾಗಿ ಮುಂದಿನ ದಿನಗಳಲ್ಲಿ ಭಾರತದಿಂದ ವಿದೇಶಕ್ಕೆ ರಫ್ತಾಗುವ ಅಹಾರ ಪದಾರ್ಥದಲ್ಲಿ ಯಾವ ಪ್ರಮಾಣದಲ್ಲಿ ವಿಕಿರಣದ ಅಂಶ ಒಳಗೊಂಡಿದೆ ಎನ್ನುವುದನ್ನು ಪತ್ತೆಹಚ್ಚಿ ಅಧಿಕೃತವಾಗಿ ದಾಖಲಿಸಬಹುದಾಗಿದೆ. ಇತರ ದೇಶಗಳ ಆಹಾರ ವಸ್ತುಗಳ ಮೇಲೆ ಅತ್ಯಂತ ಸಣ್ಣ ಪ್ರಮಾಣದಲ್ಲಿ ವಿಕಿರಣದ ಪರಿಣಾಮವಿದ್ದರೂ ಪತ್ತೆಹಚ್ಚಲು ಸಾಧ್ಯವಾಗುವ ಸಲಕರಣೆಗಳನ್ನು ಹೊಂದಿರುವ ದೇಶದ ಅತ್ಯಾಧುನಿಕ ಸ್ವತಂತ್ರ ಕೇಂದ್ರ ಇದಾಗಿದೆ. ಇದರ ಮೂಲಕ ವಿಕಿರಣದಿಂದ ಪರಿಸರದ ಮೇಲಾಗುವ ಸಮೀಕ್ಷೆ ಕಾರ್ಯವನ್ನು ನಿರ್ವಹಿಸುವ ಕೇಂದ್ರವನ್ನು ಹೊಂದಿದೆ ಎಂದು ಭೈರಪ್ಪ ತಿಳಿಸಿದರು.

ಬಾಬಾ ಅಣು ಸಂಶೋಧನಾ ಕೇಂದ್ರದ ಉಪನಿರ್ದೇಶಕ ಡಾ.ಪಿ.ಎಸ್.ಪ್ರದೀಪ್ ಕುಮಾರ್ ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಕಿರಣ ಸಂಶೋಧನಾ ಕೇಂದ್ರದ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ಪರಿಸರ ವಿಕಿರಣದ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಅದೇ ರೀತಿ ಅಣು ವಿದ್ಯುತ್ ಸ್ಥಾವರಗಳಿಂದ ಜೀವಹಾನಿ ಯಾಗುತ್ತದೆ. ವಿಕಿರಣ ಪ್ರಮಾಣ ಹೆಚ್ಚು ಹೊರ ಸೂಸುವುದರಿಂದ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ಅನುಮಾನಗಳಿವೆ. ಆದರೆ ವಾಸ್ತವವಾಗಿ ಅಣುವಿಕಿರಣ ಘಟಕಗಳು ಹೆಚ್ಚು ಸುರಕ್ಷಿತವಾಗಿದೆ. ಅವುಗಳಿಂದ ಹೊರಸೂಸುವ ವಿಕಿರಣದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ವಿಕಿರಣ ಪ್ರಕೃತಿಯ ಬೇರೆ ಬೇರೆ ಪರಿಸರದಲ್ಲಿದೆ. ಪರಿಸರ ವಿಕಿರಣ ಸಂಶೋಧನಾ ಕೇಂದ್ರಗಳ ಮೂಲಕ ಜನಸಾಮಾನ್ಯರ ಜೀವನಕ್ಕೆ ಬೆಳೆ, ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಹಾಯವಾಗುವ ಕೆಲಸಗಳಾಗಬೇಕಾಗಿದೆ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಕೆ.ಸಿ.ಸಿದ್ದಪ್ಪ, ವಿಶ್ವವಿದ್ಯಾನಿಲಯ ಯೋಜನೆಯ ಸಂಯೋಜಕ ಕೆ.ಎಂ.ಕರುಣಾಕರ, ಕುಲಸಚಿವ ಟಿ.ಡಿ.ಕೆಂಪರಾಜು, ಡಾ.ಎಚ್.ಎಂ .ಸೋಮಶೇಖರಪ್ಪ, ಪ್ರೊ.ಬಿ.ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News