ಪಡೀಲ್‌ನ ರೈಲ್ವೆ ಕೆಳಸೇತುವೆಯೀಗ ಕೆರೆ

Update: 2016-06-10 16:22 GMT

ಮಂಗಳೂರು,ಜೂ 10: ನಗರದ ಪಡೀಲ್‌ನಿಂದ ವೀರನಗರ, ಬಜಾಲ್ ಕಡೆ ಸಂಪರ್ಕಿಸುವ ರಸ್ತೆಯಲ್ಲಿರುವ ರೈಲ್ವೆ ಕೆಳಸೇತುವೆಯ ಅವೈಜ್ಞಾನಿಕ ಕಾಮಗಾರಿ ಪ್ರಯಾಣಿಕರ ಸಂಕಷ್ಟಕ್ಕೆ ಕಾರಣವಾಗಿದೆ. ಮಳೆ ಪ್ರಾರಂಭವಾದಂದಿನಿಂದ ರೈಲ್ವೆ ಕೆಳಸೇತುವೆಯಲ್ಲಿ ನೀರು ತುಂಬಿಕೊಂಡು ಕೆರೆಯಂತೆ ಮಾರ್ಪಾಟಾಗಿದ್ದು, ಇದರಲ್ಲಿಯೇ ವಾಹನ ಸವಾರರು ಸಂಚರಿಸಬೇಕಾಗಿದೆ.

ಇಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳು ಕೆಳಸೇತುವೆಯಲ್ಲಿ ಶೇಖರವಾದ ನೀರಿನಲ್ಲಿ ಮುಕ್ಕಾಲು ಭಾಗದಷ್ಟು ಮುಳಗಿದರೆ, ಇತರ ವಾಹನಗಳು ಅರ್ಧದಷ್ಟು ಮುಳುಗುತ್ತಿದ್ದರೂ ಇದಕ್ಕೆ ಪರಿಹಾರ ರೂಪಿಸುವ ಪ್ರಯತ್ನ ಇನ್ನೂ ನಡೆದಿಲ್ಲ.

ಈ ರಸ್ತೆಯಲ್ಲಿದ್ದ ರೈಲ್ವೆಗೇಟ್ ಬದಲಿಗೆ ಕಳೆದ ವರ್ಷದಿಂದೀಚೆಗೆ ನಿರ್ಮಾಣ ಮಾಡಿರುವ ರೈಲ್ವೆ ಕೆಳಸೇತುವೆಯನ್ನು ಕ್ರಮಬದ್ಧವಾಗಿ ನಿರ್ಮಿಸದೆ ಇರುವುದೇ ಈ ಸಮಸ್ಯೆಗೆ ಕಾರಣವಾಗಿದೆ.

ರೈಲ್ವೆ ಕೆಳಸೇತುವೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದೇ ಇಷ್ಟೆಲ್ಲಾ ಆವಾಂತರಗಳಿಗೆ ಕಾರಣವಾಗಿದೆ.
 ಕೆಳಸೇತುವೆಯು ಮಧ್ಯಭಾಗದಲ್ಲಿ ತಗ್ಗು ಹೊಂದಿದ್ದು ಆರಂಭ ಹಾಗೂ ಕೊನೆಯಲ್ಲಿ ಎತ್ತರವನ್ನು ಹೊಂದಿದೆ. ಎರಡು ಭಾಗದಲ್ಲೂ ಎತ್ತರ ನಡುವೆ ತಗ್ಗು ರೀತಿಯಲ್ಲಿ ರಸ್ತೆ ನಿರ್ಮಾಣ ನಡೆದಾಗ ಸ್ಥಳೀಯರು ಮುಂದೆ ಸಮಸ್ಯೆಯಾಗುವ ಬಗ್ಗೆ ಗಮನಸೆಳೆದಿದ್ದರು. ಮಧ್ಯಭಾಗದಲ್ಲಿ ನಿಲ್ಲುವ ನೀರು ಹೊರಹೋಗಲು ಬೇಕಾದ ಚರಂಡಿ ವ್ಯವಸ್ಥೆಯನ್ನು ಮಾಡಿಲ್ಲ. ಇದರಿಂದ ನೀರು ಅಲ್ಲಿಯೆ ಸಂಗ್ರಹವಾಗುತ್ತಿರುವುದು ಈ ಸಮಸ್ಯೆಗೆ ಕಾರಣವಾಗಿದೆ.

ಇಲ್ಲಿ ನಿರ್ಮಾಣ ಮಾಡಿರುವ ಕೆಳಸೇತುವೆಯೀಗ ಕೆರೆಯಾಗಿ ಮಾರ್ಪಾಟಾಗಿದ್ದರೂ ರೈಲ್ವೆ ಅಧಿಕಾರಿಗಳಾಗಲಿ, ಮನಪಾ ಅಧಿಕಾರಿಗಳು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪವಿದೆ.

ಪಡೀಲ್‌ನಿಂದ ವೀರನಗರ, ಪಕ್ಕಲಡ್ಕ, ಬಜಾಲ್, ಎಕ್ಕೂರು, ಜೆಪ್ಪಿನಮೊಗರು ಕಡೆಗೆ ತೆರಳುವವರು ಈ ರಸ್ತೆಯನ್ನು ಬಳಸುತ್ತಿರುವುದರಿಂದ ಈ ರಸ್ತೆಯಲ್ಲಿ ನಿರಂತರವಾಗಿ ವಾಹನ ಸಂಚಾರವಿದೆ. ಆದರೆ ಮಳೆಗಾಲ ಆರಂಭವಾದ ನಂತರದಿಂದ ಈ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು ಸಂಕಷ್ಟವನ್ನನುಭವಿಸುತ್ತಿದ್ದಾರೆ.

ಮಳೆಗಾಲ ಆರಂಭವಾದಂದಿನಿಂದ ಈ ರಸ್ತೆಯಲ್ಲಿ ಓಡಾಡುವುದೆ ಒಂದು ಶಿಕ್ಷೆಯಾಗಿದೆ. ಪ್ರತಿದಿನ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಸಾಗುವುದರಿಂದ ಒದ್ದೆ ಬಟ್ಟೆಯಲ್ಲಿ ಕಚೇರಿ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
- ಶಂಕರ್, ದ್ವಿಚಕ್ರ ವಾಹನ ಸವಾರ.

ಇದು ರೈಲ್ವೆ ಇಲಾಖೆ ನಿರ್ಮಿಸಿದ ಕೆಳಸೇತುವೆಯಲ್ಲಿ ಆದ ಸಮಸ್ಯೆ. ಇದರಿಂದ ಸಾರ್ವಜನಿಕರು ಸಮಸ್ಯೆಗೊಳಗಾಗುತ್ತಿರುವುದರಿಂದ ಮನಪಾದಿಂದ ಇಲ್ಲಿ ತುಂಬಿರುವ ನೀರನ್ನು ಮೇಲೆತ್ತುವ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ವಿಜಯನಗರದ ದಾರಿಯಲ್ಲಿ ಇರುವ ಚರಂಡಿಯನ್ನು ತಗ್ಗುಗೊಳಿಸಿ ಕೆಳಸೇತುವೆಯಲ್ಲಿ ಸಂಗ್ರಹವಾದ ನೀರನ್ನು ಅಲ್ಲಿಗೆ ಹರಿಸಲು ಸಾಧ್ಯವೆ ಎಂಬ ಚಿಂತನೆಯನ್ನು ಮಾಡಲಾಗುತ್ತಿದೆ.

 ಜೆ.ಆರ್.ಲೋಬೊ, ಶಾಸಕರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News