ಬೆಳ್ತಂಗಡಿ: ಮಕ್ಕಳ ಕೊರತೆಯಿಂದ ಮುಚ್ಚಿದ ಸರಕಾರಿ ಶಾಲೆ
ಬೆಳ್ತಂಗಡಿ, ಜೂ.10: ಸರಕಾರಿ ಶಾಲೆಗಳಲ್ಲಿ ಸರಿಯಾದ ಶಿಕ್ಷಕರಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಇದರಿಂದಾಗಿ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಖಾಸಗಿ ಶಾಲೆಗಳತ್ತ್ತ ಮುಖ ಮಾಡಿದ್ದು, ಸರಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಬಳೆಂಜದ ನಿಟ್ಟಡ್ಕ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ದಾಖಲಾತಿ ಇಲ್ಲದೆ ತಾತ್ಕಾಲಿಕವಾಗಿ ಮುಚ್ಚಿದೆ.
ಸರಕಾರ 10ಕ್ಕಿಂತ ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಗಳನ್ನು ಸಮೀಪದ ಶಾಲೆಗಳಿಗೆ ವೀಲಿನಗೊಳಿಸಲು ಚಿಂತನೆ ನಡೆಸಿತ್ತು. ಆದರೆ ವಿರೋಧ ಬಂದ ಹಿನ್ನಲೆಯಲ್ಲಿ ಯಾವುದೇ ಆದೇಶ ಆಗಿಲ್ಲ. ನಿಟ್ಟಡ್ಕ ಶಾಲೆಯಲ್ಲಿ 1 ರಿಂದ 5ರವರೆಗೆ ತರಗತಿಗಳಿದ್ದು, ಇಲ್ಲಿ ಈ ವರ್ಷ ವಿದ್ಯಾರ್ಥಿಗಳ ದಾಖಲಾತಿ ನಡೆದಿಲ್ಲ. 2015-16ರಲ್ಲಿ ಶಾಲೆಯಲ್ಲಿ ಒಟ್ಟು 8 ಮಕ್ಕಳಿದ್ದರು. ಅದರಲ್ಲಿ 3 ಮಕ್ಕಳು 5ನೆ ತರಗತಿ ಉತ್ತೀರ್ಣರಾಗಿ 6 ನೆ ತರಗತಿಗೆ ಬೇರೆ ಶಾಲೆಗೆ ಹೋಗಿದ್ದಾರೆ. ಉಳಿದಂತೆ 5 ಮಕ್ಕಳು ಬೇರೆ ಶಾಲೆಗೆ ಸೇರ್ಪಡೆಯಾಗಿದ್ದಾರೆ.
ಏಕೋಪಾಧ್ಯಾಯರನ್ನು ಹೊಂದಿದ್ದ ಶಾಲೆ 5 ತರಗತಿಯನ್ನು ಒಬ್ಬರೇ ಶಿಕ್ಷಕರು ನಿಭಾಯಿಸುತ್ತಿದ್ದರು. ಅವರು ಭಡ್ತಿ ಹೊಂದಿ ಬೇರೆ ಶಾಲೆಗೆ ಹೋಗಿದ್ದಾರೆ. ಇದೀಗ ಈ ಶಾಲೆಯಲ್ಲಿ ಶಿಕ್ಷಕರೂ ಇಲ್ಲ, ಮಕ್ಕಳು ಇಲ್ಲದ ಶಾಲೆಗೆ ಈ ವರ್ಷದಿಂದ ಬೀಗ ಬೀಳಲಿದೆ. ಕಳೆದ ಮೂರು ವರ್ಷಗಳ ಹಿಂದೆ ನೆರಿಯ ಗ್ರಾಮದ ದೇವಗಿರಿ ಶಾಲೆಯು ಮಕ್ಕಳಿಲ್ಲದೆ ಮುಚ್ಚಿತ್ತು. ಪ್ರಸ್ತುತ ವರ್ಷ ತಾಲೂಕಿನಲ್ಲಿ ಒಂದು ಸರಕಾರಿ ಶಾಲೆ ಮಕ್ಕಳ ಕೊರತೆಯಿಂದ ಬಾಗಿಲು ಹಾಕಿದಂತಾಗಿದೆ.
ಮಕ್ಕಳ ದಾಖಲಾತಿ ಕೊರತೆಯಿಂದಾಗಿ 10ಕ್ಕಿಂತ ಕಡಿಮೆ ದಾಖಲಾತಿ ಹೊಂದಿದ ರಾಜ್ಯದ 7 ಜಿಲ್ಲೆಗಳ 791 ಶಾಲೆಗಳನ್ನು ತಕ್ಷಣ ಸಮೀಪದ ಶಾಲೆಗಳಿಗೆ ವಿಲೀನಗೊಳಿಸುವಂತೆ ಸರಕಾರ ನಿರ್ದೇಶನ ನೀಡಿ, ಇದೀಗ ವ್ಯಾಪಕ ವಿರೋಧ ವ್ಯಕ್ತವಾದ್ದರಿಂದ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ. ಒಂದು ವೇಳೆ ‘ವಿಲೀನ’ದ ಹೆಸರಿನಲ್ಲಿ ಈ ಶಾಲೆಗಳು ಮುಚ್ಚಿದರೆ ರಾಜ್ಯದಲ್ಲಿ ಒಟ್ಟು 2,959 ಸರಕಾರಿ ಶಾಲೆಗಳು ಮುಚ್ಚುಗಡೆಯಾದಂತಾಗುತ್ತದೆ.
ತಾಲೂಕಿನಲ್ಲಿ ಜನವಸತಿ ಕಡಿಮೆ ಇರುವ ನಿಟ್ಟಡ್ಕ ಕಿ. ಪ್ರಾ. ಶಾಲೆಯಲ್ಲಿ ಪ್ರಸ್ತುತ ವರ್ಷ ಮಕ್ಕಳ ದಾಖಲಾತಿ ಆಗಿಲ್ಲ. ಈ ಶಾಲೆಯಲ್ಲಿ ಕರ್ತವ್ಯದಲ್ಲಿದ್ದ ಶಿಕ್ಷಕರು ಭಡ್ತಿಗೊಂಡು ತೆರಳಿದ್ದಾರೆ. ಮಕ್ಕಳ ಸೇರ್ಪಡೆಯೂ ಆಗಿಲ್ಲ. ತಾತ್ಕಾಲಿಕವಾಗಿ ಮುಚ್ಚುಲಾಗುತ್ತಿದೆ. ಮಕ್ಕಳ ದಾಖಲಾತಿ ಆದರೆ ಪುನರಾರಂಭ ಮಾಡಲಾಗುವುದು. ಶಿಕ್ಷಕರನ್ನು ನಿಯೋಜನೆಗೊಳಿಸಲಾಗುವುದು.
- ಸುಮಂಗಲಾ, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ.