×
Ad

ಸಚಿವರೂ ಸರಕಾರಿ ಅಧಿಕಾರಿಗಳೆಂಬ ಸಿಐಸಿ ಆದೇಶಕ್ಕೆ ಹೈಕೋರ್ಟ್ ತಡೆ

Update: 2016-06-10 23:02 IST

ಹೊಸದಿಲ್ಲಿ,ಜೂ.10: ಕೇಂದ್ರ ಮತ್ತು ರಾಜ್ಯ ಸಂಪುಟಗಳ ಸಚಿವರು ‘ಸರಕಾರಿ ನೌಕರ’ರಾಗಿದ್ದಾರೆ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ತಮಗೆ ಕೇಳಲಾಗಿರುವ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಲು ಬದ್ಧರಾಗಿದ್ದಾರೆ ಎಂದು ಎತ್ತಿ ಹಿಡಿದಿರುವ ಮಾರ್ಚ್ 12ರ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ಆದೇಶಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ತಡೆಯಾಜ್ಞೆಯನ್ನು ನೀಡಿದೆ.
ಕೆಲವು ಅಧಿಕಾರಿಗಳ ನಿಯೋಜನೆ ಅಥವಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನೇಮಕ ಸೇರಿದಂತೆ ಪ್ರತಿ ಸಚಿವರಿಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆಯೂ ಸಿಐಸಿ ಕೇಂದ್ರ ಮತ್ತು ರಾಜ್ಯಗಳಿಗೆ ಶಿಫಾರಸು ಮಾಡಿತ್ತು.
 ಸಿಐಸಿಯ ಆದೇಶವನ್ನು ಪ್ರಶ್ನಿಸಿ ಕೇಂದ್ರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ನ್ಯಾ.ಸಂಜೀವ ಸಚದೇವ ಅವರ ಪೀಠವು ಈ ಮಧ್ಯಾಂತರ ಆದೇಶವನ್ನು ನೀಡಿತು. ಸಚಿವರು ನಾಗರಿಕರ ಮಾಹಿತಿ ಹಕ್ಕನ್ನು ಗೌರವಿಸುವಂತಾಗಲು ಮತ್ತು ಅವರಿಗೆ ಉತ್ತರದಾಯಿಯಾಗುವಂತಾಗಲು ‘ಗೋಪ್ಯತೆಯ ಪ್ರಮಾಣ ವಚನ’ದ ಬದಲು ‘ಪಾರದರ್ಶಕತೆಯ ಪ್ರಮಾಣ ವಚನ’ವನ್ನು ಸ್ವೀಕರಿಸಬೇಕು ಎಂದೂ ಸಿಐಸಿ ಆದೇಶಿಸಿತ್ತು.
ಅಹ್ಮದ್ ನಗರ ನಿವಾಸಿ ಹೇಮಂತ್ ಧಾಗ್ ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಸಿಐಸಿ ಈ ಆದೇಶವನ್ನು ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News