ಸುಳ್ಯ: ಅನುದಾನವಿಲ್ಲದೆ ಸ್ಥಗಿತಗೊಂಡ ಅಂಬೇಡ್ಕರ್ ಭವನ ಕಾಮಗಾರಿ
ಸುಳ್ಯ, ಜೂ.10: ನಾಲ್ಕು ವರ್ಷಗಳ ಹಿಂದೆ ಪ್ರಾರಂವಾದ ಸುಳ್ಯದ ನೂತನ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಅನುದಾನದ ಕೊರತೆಯಿಂದ ಪೂರ್ಣ ಸ್ಥಗಿತಗೊಂಡಿದ್ದು, ಪೊದೆ ಬೆಳೆದು ಪಿಲ್ಲರ್‌ನ ಕಬ್ಬಿಣಗಳು ತುಕ್ಕು ಹಿಡಿಯುತ್ತಿವೆ. 50 ಲಕ್ಷ ರೂ. ವೆಚ್ಚದ ಕಾಮಗಾರಿ ಮಣ್ಣು ಪಾಲಾಗುತ್ತಿದೆ.
ತಾಲೂಕಿನಲ್ಲಿ ಯಾವುದೇ ಸರಕಾರಿ ಕಾಮಗಾರಿ ನಿಗದಿತ ತಿಂಗಳುಗಳಲ್ಲಿ ಮುಗಿಯುವುದಿಲ್ಲ. ಅದಕ್ಕೆ ಹಲವಾರು ವರ್ಷಗಳೇ ಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. ಇದಕ್ಕೆ ತಾಲೂಕು ಕ್ರೀಡಾಂಗಣ ಉತ್ತಮ ಉದಾಹರಣೆ. ಈಗ ಈ ಸಾಲಿಗೆ ಸುಳ್ಯದ ನೂತನ ಅಂಬೇಡ್ಕರ್ ಭವನ ಸೇರ್ಪಡೆಗೊಂಡಿದೆ.
ನಾಲ್ಕು ವರ್ಷಗಳ ಹಿಂದೆ ತಾಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸರಕಾರ 1 ಕೊಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಸುಳ್ಯ ಈಗಿನ ಅಂಬೇಡ್ಕರ್ ಭವನದ ಹಿಂದುಗಡೆ ನಿವೇಶನ ಗುರುತಿಸಿ ಅಲ್ಲಿ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಯೂ ಆರಂಭವಾಗಿತ್ತು. ಶಾಸಕ ಎಸ್.ಅಂಗಾರರ ಕನಸು ಸುಸಜ್ಜಿತ ಅಂಬೇಡ್ಕರ್ ಭವನ. ಹಾಗಾಗಿ 3 ಕೋಟಿ ರೂ. ವೆಚ್ಚದ ಯೋಜನಾ ವರದಿ ತಯಾರಿಸಿ ಅದರಂತೆ ಕಾಮಗಾರಿಯೂ ನಡೆಯಿತು. ಈ ಸಂದರ್ಭ ನಿವೇಶನದಲ್ಲಿ ರಸ್ತೆ ನೀಡುವಂತೆ ಸ್ಥಳೀಯರೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಅಲ್ಲಿಗೆ ಕಾಮಗಾರಿ ಸ್ಥಗಿತವಾಯಿತು.
ಸಮಾಜ ಕಲ್ಯಾಣ ಇಲಾಖೆಯಿಂದ 1 ಕೋಟಿ ರೂ. ಮಂಜೂರಾಗಿತ್ತು. ಆದರೆ, ಬಿಡುಗಡೆಯಾದದ್ದು ಕೇವಲ 50 ಲಕ್ಷ ರೂ. ಮಾತ್ರ. ಬಂದಷ್ಟು ಅನುದಾನವನ್ನು ಬಳಸಿಕೊಂಡು ಕಾಮಗಾರಿ ಮಾಡಲಾಗಿದೆ. ಮತ್ತೆ ಅನುದಾನ ಬಿಡುಗಡೆಯಾಗದ ಕಾರಣ ಯೋಜನೆ ಸ್ಥಗಿತಗೊಂಡಿದೆ. ಅನುದಾನ ನೀಡುವಂತೆ ಹಲವು ಬಾರಿ ಸರಕಾರದ ಗಮನಕ್ಕೆ ಶಾಸಕರು ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ಕೂಡಲೇ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದರೆ ಉಳಿದ 2 ಕೋಟಿ ಹಣವನ್ನು ವಿವಿಧ ಮೂಲಗಳಿಂದ ಸಂಗ್ರಹಿ ವ್ಯವಸ್ಥಿತವಾದ ಅಂಬೇಡ್ಕರ್ ಭವನ ನಿಧಾನವಾಗಿಯಾದರೂ ಪೂರ್ತಿಗೊಳಿಸುವುದಾಗಿ ಶಾಸಕರು ಭರವಸೆ ನೀಡಿದ್ದಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದ್ದಾರೆ.
ಅಂಬೇಡ್ಕರ್ ಭವನದ ನೀಲನಕಾಶೆಯಲ್ಲಿ ನಾಲ್ಕು ಮಹಡಿಯ ಯೋಜಿತ ಕಟ್ಟಡ, ಸುಸಜ್ಜಿತ ವೇದಿಕೆ, 1,000 ಮಂದಿ ಕುಳಿತುಕೊಳ್ಳುವ ಸಭಾಭವನ, ಪಾಕಶಾಲೆ, ಊಟದ ಹಾಲ್, ಸ್ನಾನಗೃಹ, ಶೌಚಾಲಯ, ಲಿಫ್ಟ್ ವ್ಯವಸ್ಥೆ ಸೇರಿದಂತೆ ಎಲ್ಲ ಅತ್ಯಾಧುನಿಕ ವ್ಯವಸ್ಥೆ ಜೋಡಿಸಿಕೊಳ್ಳಲಾಗಿತ್ತು. ಇದೀಗ ಅನುದಾನ ಒದಗಿ ಬಾರದ ಕಾರಣ ಇವೆಲ್ಲವನ್ನು ನೀಲ ನಕಾಶೆಯಲ್ಲಷ್ಟೆ ಉಳಿದುಕೊಂಡಿದೆ.
ತಾನು ತಾಲೂಕು ಪಂಚಾಯತ್ ಅಧ್ಯಕ್ಷನಾಗಿದ್ದಾಗ ನಿವೇಶನ ಕಾಯ್ದಿರಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಬಳಿಕ ಸರಕಾರಗಳು ಬದಲಾವಣೆ ಆಗಿದ್ದು, ಅನುದಾನ ಬಿಡುಗಡೆ ಆಗದೆ ಕಾಮಗಾರಿ ಸ್ಥಗಿತವಾಗಿದೆ. ಸರಕಾರ ಬಿಡುಗಡೆ ಮಾಡಿದ ಅನುದಾನಕ್ಕೆ ಸರಿಯಾಗಿ ಯೋಜನೆ ತಯಾರಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಂಕರ್ ಪೆರಾಜೆ ಹೇಳಿದ್ದಾರೆ.
ಮೀಸಲು ಕ್ಷೇತ್ರವಾದ ಸುಳ್ಯಕ್ಕೆ ಸುಸಜ್ಜಿತ ಅಂಬೇಡ್ಕರ್ ಭವನದ ಅಗತ್ಯವಿದೆ. ಆದರೆ ನೂತನ ಕಟ್ಟಡದ ಕಾಮಗಾರಿ ಆರಂಭವಾಗುವ ಸಂದರ್ಭ ಸ್ಥಳಿಯರೊಬ್ಬರು ತಮಗೆ ರಸ್ತೆ ನೀಡದೆ ಕಟ್ಟಡ ಕಟ್ಟಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಕಾಮಗಾರಿ ಸ್ಥಗಿತವಾಗಿತ್ತು. ಆದರೆ ತಡೆಯಾಜ್ಞೆ ತೆರವಾಗಿದ್ದರೂ ಕಾಮಗಾರಿ ಮತ್ತೆ ಆರಂವಾಗಿಲ್ಲ. ಅನುದಾನ ಬಿಡುಗಡೆಗೊಳ್ಳದೆ ಕಾಮಗಾರಿ ಸ್ಥಗಿತವಾಗಿದ್ದರೆ ಸರಕಾರದ ಮೇಲೆ ಒತ್ತಡ ಹಾಕಿ ಅನುದಾನ ತರಿಸುವ ಯತ್ನ ಮಾಡುವುದಾಗಿ ಸಾಮಾಜಿಕ ಕಾರ್ಯಕರ್ತ ನಂದರಾಜ್ ಸಂಕೇಶ್ ಹೇಳಿದ್ದಾರೆ.