×
Ad

ಮೂಡುಬಿದಿರೆ: ರಿಂಗ್‌ರೋಡ್‌ಗೆ ಭೂಮಿ ನೀಡಿದವರಿಗೆ ಇನ್ನೂ ದೊರಕಿಲ್ಲ ಪರಿಹಾರದ ಭಾಗ್ಯ

Update: 2016-06-10 23:43 IST

ಮೂಡುಬಿದಿರೆ, ಜೂ.10: ಇಲ್ಲಿನ ಪೇಟೆಯಲ್ಲಿ ಅಧಿಕವಾಗುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ವರಾಜ್ ಮೈದಾನದಿಂದ ಬೆಳ್ಮಣ್ ಮತ್ತು ಕಾರ್ಕಳಕ್ಕೆ ಸಂಪರ್ಕ ಕಲ್ಪಿಸಲು ಸುಸಜ್ಜಿತವಾಗಿ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿರುವ ರಿಂಗ್‌ರೋಡ್‌ಗೆ ಭೂಮಿ ಬಿಟ್ಟು ಕೊಟ್ಟವರಿಗೆ ಪರಿಹಾರದ ಭಾಗ್ಯ ಇನ್ನೂ ಕೂಡಾ ದೊರಕಿಲ್ಲ ಎಂದು ತಿಳಿದು ಬಂದಿದೆ.

ಬೆಳೆಯುತ್ತಿರುವ ಮೂಡುಬಿದಿರೆಗೆ ಬೈಪಾಸ್‌ನ ಅಗತ್ಯವಿದೆ ಎಂಬ ನಿಟ್ಟಿನಲ್ಲಿ ಕಳೆದ 18 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಸ್ವರಾಜ್ಯ ಮೈದಾನದಿಂದ ಅಲಂಗಾರು ರಸ್ತೆವರೆಗೆ ಕೃಷಿ ಸಹಿತ, ಕುಮ್ಕಿ ಭೂಮಿಯನ್ನು ಹೊಂದಿರುವ ಫಲಾನುಭವಿಗಳಿಂದ ಸೆಂಟ್ಸ್‌ಗೆ 800ರಂತೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿತ್ತು. ಆದರೆ ಕೆಲವು ಹಕ್ಕುದಾರರು ಸೆಂಟ್ಸ್‌ಗೆ 800 ಕಡಿಮೆಯಾಯಿತೆಂದು ಕೋರ್ಟ್‌ಗೆ ಮೊರೆ ಹೋಗಿದ್ದರಿಂದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ತೊಡಕುಂಟಾಗಿತ್ತು. ಇದರಿಂದಾಗಿ ಪರಿಹಾರದ ಮೊತ್ತವೂ ದೊರಕದಂತಾಗಿತ್ತು.

ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಮೂಡುಬಿದಿರೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ವಾಹನಗಳ ದಟ್ಟಣೆಯೂ ಜಾಸ್ತಿಯಾಗಿರುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ಅರಿತ ರಾಜ್ಯ ಸರಕಾರವು ಬೈಪಾಸ್ ರಸ್ತೆಗೆ ಬದಲಾಗಿ 4.95 ಕೋಟಿ ರೂ. ವೆಚ್ಚದಲ್ಲಿ ವರ್ತುಲ ರಸ್ತೆಯನ್ನು ನಿರ್ಮಿಸಲು ಅನುದಾನವನ್ನು ಮಂಜೂರುಗೊಳಿಸಿತ್ತು. ಅದರಂತೆ ಸ್ವರಾಜ್ ಮೈದಾನದಿಂದ ಕಡಲಕೆರೆ ಮೂಲಕ ಬೆಳ್ಮಣ್ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ವರ್ತುಲ ರಸ್ತೆಯ ಒಟ್ಟು ವಿಸ್ತೀರ್ಣ ಸುವಾರು 3.16ಕಿಮೀ, ಚರಂಡಿ ಸೇರಿ ರಸ್ತೆಯ ಒಟ್ಟು ಅಗಲ 12 ಮೀಟರ್ ಆಗಿದ್ದು 7 ಮೀಟರ್ ಅಗಲದಲ್ಲಿ ಡಾಮರೀಕರಣಗೊಂಡಿರುವ ವರ್ತುಲ ರಸ್ತೆಯು ಸುಸಜ್ಜಿತವಾಗಿ ನಿರ್ಮಾಣಗೊಂಡು ಘನ ವಾಹನಗಳ ಸಂಚಾರಕ್ಕೆ ತೆರೆದುಕೊಳ್ಳಲು ಕಾದು ನಿಂತಿದೆ.

ಆದರೆ ಬೈಪಾಸ್ ರಸ್ತೆಗಾಗಿ ತಮ್ಮ ಕೃಷಿ ಭೂಮಿ ಬಿಟ್ಟುಕೊಟ್ಟಿರುವ ಫಲಾನುಭವಿಗಳಿಗೆ ಮಾತ್ರ ಇನ್ನೂ ಕೂಡಾ ಪರಿಹಾರದ ಭಾಗ್ಯ ದೊರೆತಿಲ್ಲದಿರುವುದರಿಂದ ಇದೀಗ ಉದ್ಘಾಟನೆಗೆ ಸಜ್ಜಾಗಿರುವ ರಿಂಗ್‌ರೋಡ್‌ನ ಉದ್ಘಾಟನೆಯ ಸಂದರ್ಭದಲ್ಲಿ ಪ್ರತಿಭಟನೆಯ ಮಾಡುವ ಯೋಚನೆಯನ್ನು ಹೊಂದಿದ್ದಾರೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News