×
Ad

ಕಾಸರಗೋಡು: ವಿದ್ಯಾರ್ಥಿಗಳ ಸಂಖ್ಯೆ ಕುಂಠಿತ

Update: 2016-06-10 23:59 IST

ಕಾಸರಗೋಡು,ಜೂ.10: ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ಶೈಕ್ಷಣಿಕ ವರ್ಷಾರಂಭದ ಬಳಿಕದ ಆರನೆ ದಿನ ನಡೆದ ಮಕ್ಕಳ ಗಣತಿಯಿಂದ ಈ ಅಂಕಿಅಂಶ ಲಭಿಸಿದೆ.

1ರಿಂದ 10ನೆ ತರಗತಿ ತನಕದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 1,230 ಮಕ್ಕಳ ಕೊರತೆ ಕಂಡುಬಂದಿದೆ. ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1,73,801 ವಿದ್ಯಾರ್ಥಿಗಳು ವಿವಿಧ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಕಳೆದ ವರ್ಷ 1,75,031 ಮಕ್ಕಳಿದ್ದರು. ಸರಕಾರಿ, ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದರೆ, ಅನಾನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

 ಸರಕಾರಿ ಶಾಲೆಗಳಲ್ಲಿ ಕಳೆದ ವರ್ಷ 86,408 ವಿದ್ಯಾರ್ಥಿಗಳು ಕಲಿತಿದ್ದರೆ, ಈ ಬಾರಿ 84,997 ಮಂದಿ ಮಾತ್ರ ಇದ್ದಾರೆ. 1,411 ಮಕ್ಕಳ ಕೊರತೆ ಕಂಡು ಬರುತ್ತಿದೆ. ಅನುದಾನಿತ ಶಾಲೆಗಳಲ್ಲಿ ಕಳೆದ ವರ್ಷ 66,644 ವಿದ್ಯಾರ್ಥಿಗಳು ಕಲಿತಿದ್ದರೆ, ಈ ವರ್ಷ 65,362 ಮಕ್ಕಳು ಕಲಿಯುತ್ತಿದ್ದಾರೆ. 1,282 ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ. ಆದರೆ ಅನುದಾನಿತ ಶಾಲೆಯಲ್ಲಿ ಕಳೆದ ವರ್ಷಕ್ಕಿಂತ 1,463 ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಕಳೆದ ವರ್ಷ 21,979 ವಿದ್ಯಾರ್ಥಿಗಳಿದ್ದರೆ, ಈ ಬಾರಿ 23,442 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಮಂಜೇಶ್ವರದಲ್ಲಿ ಹೆಚ್ಚಳ

ಕುಂಬಳೆಯಲ್ಲಿ ಕುಸಿತ ಮಂಜೇಶ್ವರ ಶೈಕ್ಷಣಿಕ ಉಪಜಿಲ್ಲೆಯಲ್ಲಿ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಕುಂಬಳೆ ಉಪ ಜಿಲ್ಲೆಯಲ್ಲಿ ಕುಸಿತ ಕಂಡಿದೆ. ಕುಂಬಳೆ ಉಪ ಜಿಲ್ಲೆಯಲ್ಲಿ 1ರಿಂದ 7ರ ತನಕ 11, 260 ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷ 12,504 ವಿದ್ಯಾರ್ಥಿಗಳಿದ್ದರು. ಮಂಜೇಶ್ವರ ಉಪ ಜಿಲ್ಲೆಯಲ್ಲಿ 1,206 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಒಂದನೇ ತರಗತಿಗೆ 1,931 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಕಳೆದ ಬಾರಿ ಒಂದನೆ ತರಗತಿಯಲ್ಲಿ 1,887 ವಿದ್ಯಾರ್ಥಿಗಳಿದ್ದರು. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ ಒಂದರಿಂದ ಏಳರ ತನಕ 16,802 ಮಕ್ಕಳಿದ್ದಾರೆ.

ಕೊಟ್ಟಟಗುಯಿ ಶಾಲೆಯಲ್ಲಿ 12 ವಿದ್ಯಾರ್ಥಿಗಳು

ಕಾರಡ್ಕ ಕೊಟ್ಟಂಗುಯಿ ಎಎಲ್‌ಪಿ ಶಾಲೆಯ ಒಂದರಿಂದ ನಾಲ್ಕನೆ ತರಗತಿ ತನಕದ ತರಗತಿಯಲ್ಲಿ 12 ವಿದ್ಯಾರ್ಥಿಗಳಿದ್ದಾರೆ. 1ನೆ ತರಗತಿಯಲ್ಲಿ 2, ಎರಡರಲ್ಲಿ 6, ಮೂರರಲ್ಲಿ 1, ನಾಲ್ಕನೆ ತರಗತಿಯಲ್ಲಿ 3 ವಿದ್ಯಾರ್ಥಿಗಳಿದ್ದಾರೆ. ರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವುದರಿಂದ ಈ ಪ್ರದೇಶದ ಮಕ್ಕಳ ಶಿಕ್ಷಣ ಮೊಟಕುಗೊಳ್ಳಬಾರದು ಎಂಬ ನಿಟ್ಟಿನಲ್ಲಿ ಮುಂದುವರಿಸಿಕೊಂಡು ಹೋಗಲಾಗುತ್ತಿದ್ದು, ಓರ್ವ ಶಿಕ್ಷಕ ಸೇವೆ ಸಲ್ಲಿಸುತ್ತಿದ್ದಾರೆ. ಕಯ್ಯೂರು ಚೆರೆಯಕ್ಕರ ಸರಕಾರಿ ಎಲ್‌ಪಿ ಶಾಲೆಯಲ್ಲಿ 16 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಇಲ್ಲಿ ನಾಲ್ಕನೆ ತರಗತಿ ತನಕ ಕಲಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News