ಕಡಬ: ಡೆಂಗ್ ರೋಗಿಗಳು ಆಸ್ಪತ್ರೆಯಲ್ಲಿ, ಮುಖ್ಯ ವೈದ್ಯಾಧಿಕಾರಿ ರಜೆಯಲ್ಲಿ
ಕಡಬ, ಜೂ.11. ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಹಲವೆಡೆ ಡೆಂಗ್ ಜ್ವರದ ಬಾಧೆ ತೀವ್ರಗೊಂಡಿದ್ದು, ಕಡಬ ಪರಿಸರವೂ ಹೊರತಾಗಿಲ್ಲ.
ಕಡಬ ಸಮುದಾಯ ಆರೋಗ್ಯ ಕೇಂದ್ರವು ಕಡಬ, ಕೋಡಿಂಬಾಳ, ಕುಟ್ರುಪ್ಪಾಡಿ, ನೂಜಿಬಾಳ್ತಿಲ, ಬಲ್ಯ, ಮರ್ಧಾಳ, 102 ನೆಕ್ಕಿಲಾಡಿ, ಐತ್ತೂರು ಕೊಣಾಜೆ, ಕೊಂಬಾರು, ಬಿಳಿನೆಲೆ ಗ್ರಾಮ ಪಂಚಾಯತ್‌ಗಳನ್ನೊಳಗೊಂಡ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಪರಿಸರದ ನೂರಾರು ರೋಗಿಗಳು ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರಾರಂವಾಗಿರುವ ಡೆಂಗ್ ಜ್ವರದಿಂದಾಗಿ ಇದೇ ಆಸ್ಪತ್ರೆಯನ್ನು ನಂಬಿಕೊಂಡು ಅದೆಷ್ಟೋ ರೋಗಿಗಳು ಆಸ್ಪತ್ರೆಗೆ ಆಗಮಿಸಿದರೆ, ವೈದ್ಯಾಧಿಕಾರಿಗಳಿಲ್ಲ ಎಂಬ ಮಾತು ಕೇಳಿ ರೋಗಿಗಳು ಸೇರಿದಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಈ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು, ಶಿಶು ತಜ್ಞರು ಸೇರಿದಂತೆ 4 ಮಂದಿ ವೈದ್ಯಾಧಿಕಾರಿಗಳು, ಓರ್ವ ದಂತ ವೈದ್ಯರು ಹೀಗೆ ಒಟ್ಟು 34 ಹುದ್ದೆಗಳು ಮಂಜೂರುಗೊಂಡಿದ್ದು, ಆದರೆ ಇಲ್ಲಿ ಓರ್ವ ಮಹಿಳಾ ವೈದ್ಯಾಧಿಕಾರಿ ಸೇರಿದಂತೆ ಒಟ್ಟು 17 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 5 ಮಂದಿ ಸ್ಟಾಫ್ ನರ್ಸ್‌ಗಳು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ.
ಈ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ತ್ರಿಮೂರ್ತಿಯವರನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದ್ದು, ಇದೀಗ ಮಹಿಳಾ ವೈದ್ಯಾಧಿಕಾರಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾರದಲ್ಲಿ ನಾಲ್ಕು ದಿನ ಪಕ್ಕದ ಆಸ್ಪತ್ರೆಗಳಿಂದ ಆದ್ಯತೆ ಮೇರೆಗೆ ಹಲವು ವೈದ್ಯರು ಭೇಟಿ ನೀಡುತ್ತಿದ್ದರೂ ಜೂನ್ 1ರಂದು ಸ್ಟಾಫ್ ನರ್ಸ್ ಹಾಗೂ ಗುಮಾಸ್ತ ಮಾತ್ರ ಆಸ್ಪತ್ರೆಯಲ್ಲಿ ರೋಗಿಗಳ ಶುಶ್ರೂಷಣೆಯಲ್ಲಿ ನಿರತರಾಗಿದ್ದರು. ಹಲವು ಗ್ರಾಮಗಳಿಗೆ ಹೊಂದಿಕೊಂಡಿರುವ 34 ಹುದ್ದೆಗಳಿರಬೇಕಾದ ಒಂದು ಸಮುದಾಯ ಆಸ್ಪತ್ರೆಯಲ್ಲಿ ಕೇವಲ 2 ಸಿಬ್ಬಂದಿ ಕರ್ತವ್ಯ ನಿರ್ವಹಿಸುವುದಾದರೆ ಆರೋಗ್ಯ ಇಲಾಖೆಯ ಬೇಜವಾಬ್ದಾರಿಯ ಬಗ್ಗೆ ವಿಮರ್ಶಿಸಬೇಕಾಗುತ್ತದೆ. ಡೆಂಗ್ ಪೀಡಿತ ಅದೆಷ್ಟೋ ರೋಗಿಗಳು ಆಗಮಿಸಿದಾಗ ಇರುವ ಎರಡು ಸಿಬ್ಬಂದಿ ಎಲ್ಲವನ್ನೂ ನಿಭಾಯಿಸಬೇಕೆನ್ನುವುದು ಸುಲಭದ ಮಾತಲ್ಲ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಇಂತಹ ಸ್ಥಿತಿಯಲ್ಲೂ ಅತಿಥಿ ವೈದ್ಯಾಧಿಕಾರಿಗಳು ಸೇರಿದಂತೆ ವೈದ್ಯಾಧಿಕಾರಿ ರಜೆ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ರೋಗಿಗಳು ನೆಲ್ಯಾಡಿ ಸೇರಿದಂತೆ ಪುತ್ತೂರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮರ್ಪಕ ಚಿಕಿತ್ಸೆಗೆ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿ ಲಭ್ಯವಿಲ್ಲದುದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.
ಔಷಧಗಳು ಲಭ್ಯವಾಗಿದ್ದರೂ ಸೂಕ್ತ ಚಿಕಿತ್ಸೆ ಮಾತ್ರ ಮರೀಚಿಕೆಯಾಗಿದೆ. 30 ಹಾಸಿಗೆಗಳಿರಬೇಕಾದಲ್ಲಿ ಕೇವಲ 6 ಹಾಸಿಗೆಗಳಿದ್ದು, ರೋಗಿಗಳು ಹೊರಗಡೆ ಕುಳಿತುಕೊಳ್ಳಲು ಹಾಕಿರುವ ಬೆಂಚುಗಳ ಮೇಲೆ ಮಲಗಬೇಕಾದ ಸನ್ನಿವೇಶ ಎದುರಾಗಿದೆ. ಗ್ರಾಮೀಣ ಪ್ರದೇಶದ ಬಡ ಜನರೇ ಹೆಚ್ಚಾಗಿ ಸರಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದು, ಇನ್ನಾದರೂ ಬಡ ಜನರ ಜೀವನದ ಜತೆ ಚೆಲ್ಲಾಟವಾಡುವುದನ್ನು ಅಧಿಕಾರಿಗಳು ಸೇರಿದಂತೆ ಆಡಳಿತ ವರ್ಗ ಕೊನೆಗೊಳಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಡಬ ವೈದ್ಯಾಧಿಕಾರಿಯವರನ್ನು ಸಂಪರ್ಕಿಸಿದ್ದು, ಬೇರೆ ವೈದ್ಯರಿಲ್ಲದ ಸಮಯದಲ್ಲಿ ರಜೆ ಮಾಡಬಾರದೆಂದು ಸೂಚಿಸಲಾಗಿದೆ. ಸೋಮವಾರದಂದು ಮೆಡಿಕಲ್ ಕಾಲೇಜಿನವರ ಸಭೆ ಕರೆಯಲಾಗಿದ್ದು, ತಾತ್ಕಾಲಿಕ ನೆಲೆಯಲ್ಲಾದರೂ ವೈದ್ಯರನ್ನು ನೇಮಕ ಮಾಡಲು ಪ್ರಯತ್ನಿಸುತ್ತೇನೆ.
-ಡಾ.ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ.