×
Ad

ಸಮುದ್ರದ ನೀರನ್ನು ಶುದ್ಧೀಕರಿಸುವ ಯೋಜನೆ ಹಾಸ್ಯಾಸ್ಪದ: ಪ್ರೊ.ಮಯ್ಯ

Update: 2016-06-11 19:12 IST

ಮಂಗಳೂರು, ಜೂ.11: ಕರಾವಳಿಯಲ್ಲಿ ಸಮುದ್ರದ ನೀರನ್ನು ಸಿಹಿ ನೀರನ್ನಾಗಿ ಶುದ್ಧೀಕರಿಸುವ ಯೋಜನೆ ಹಾಸ್ಯಾಸ್ಪದ. ಅಂತಹ ಯೋಜನೆ ಮಾಡುವುದನ್ನು ವಿರೋಧಿಸಬೇಕು ಎಂದು ಎನ್‌ಐಟಿಕೆ ನಿವೃತ್ತ ಪ್ರಾಧ್ಯಾಪಕ, ಜಲತಜ್ಞ ಪ್ರೊ.ಎಸ್.ಜಿ.ಮಯ್ಯ ಹೇಳಿದ್ದಾರೆ.

ನಗರದ ಪುರಭವನದಲ್ಲಿ ಇಂದು ವಿ4 ನ್ಯೂಸ್‌ನ ದಶಮ ಸಂಭ್ರಮದ ಅವಲೋಕನ ಕಾರ್ಯಕ್ರಮದಲ್ಲಿ ‘ಬೇಕು ನಮಗೊಂದು ಜಲ ನೀತಿ’ ಸಂವಾದದಲ್ಲಿ ಅವರು ಮಾತನಾಡಿದರು.

ನೈಸರ್ಗಿಕ ನೀರನ್ನು ಸಂರಕ್ಷಿಸುವ ತಂತ್ರಜ್ಞಾನ ಬಳಕೆಯಾಗಬೇಕೇ ವಿನಃ, ಉಪ್ಪು ನೀರು ಶುದ್ಧೀಕರಿಸುವುದು ಸರಿಯಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿ ತೈಲಕ್ಕಿಂತ ನೀರು ದುಬಾರಿ. ಅವರಿಗೆ ಬೇರೆ ದಾರಿಯೇ ಇಲ್ಲದೆ ಸಮುದ್ರ ನೀರು ಶುದ್ಧೀಕರಣ ಅನಿವಾರ್ಯ. ಸಮುದ್ರದ ನೀರಿನಲ್ಲಿ ಉಪ್ಪಿನಾಂಶ ಮಾತ್ರ ಇರುವುದಲ್ಲ. ಬೇರೆ ಸಾಕಷ್ಟು ಅಂಶಗಳಿವೆ. ಅದನ್ನು ಬೇರ್ಪಡಿಸಿದರೆ ಆ ತ್ಯಾಜ್ಯವನ್ನು ಮತ್ತೆ ಸಮುದ್ರಕ್ಕೆ ಹಾಕಬೇಕು. ಅದನ್ನು ಹತ್ತಿರ ಹಾಕಲಾಗದು, 10 ಕಿ.ಮೀ. ದೂರ ಹೋಗಬೇಕು. ಆ ಭಾರಿ ಖರ್ಚನ್ನು ಉದ್ಯಮಗಳು ಭರಿಸುವುದಿಲ್ಲ. ತೆರಿಗೆ ಪಾವತಿಸುವ ಜನಸಾಮಾನ್ಯರ ಮೇಲೆಯೇ ಹೊರೆ ಬೀಳಲಿದೆ ಎಂದು ಪ್ರೊ.ಮಯ್ಯ ಹೇಳಿದರು.

ಮಳೆಗಾಲದಲ್ಲಿ ನೀರು ಮರುಪೂರಣ ಮಾಡುವ ಇಂಗು ಗುಂಡಿ ಯೋಜನೆಗೂ ಅರ್ಥವಿಲ್ಲ. ಜನವರಿ- ೆಬ್ರವರಿಯಲ್ಲಿ ನದಿ, ತೊರೆ, ಕಣಿವೆಗಳಲ್ಲಿ ಹರಿಯುವ ನೀರನ್ನು ಸಂರಕ್ಷಿಸುವ ತಂತ್ರಜ್ಞಾನ ಜಾರಿಗೆ ಬರಬೇಕು. ಆ ನೀರನ್ನು ಮೇ ತನಕ ಉಳಿಸಬಹುದು. ಕರಾವಳಿಯಲ್ಲಿ ನೀರಿನ ಸಂರಕ್ಷಣೆಗಾಗಿ ಜಲ ನೀತಿ ಅತೀ ಅಗತ್ಯವಿದ್ದು, ಅದಕ್ಕಾಗಿ ಸರಕಾರ ಶಾಸನಬದ್ಧವಾಗಿ ಕರಾವಳಿ ಜಲಸಂರಕ್ಷಣಾ ಪ್ರಾಧಿಕಾರ ರಚಿಸಬೇಕು ಎಂದು ಪ್ರೊ.ಮಯ್ಯ ಸಲಹೆ ನೀಡಿದರು.

ನಿರೂಪಕ ರಾಮ್ದಾಸ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಸತ್ಯಜಿತ್ ಸುರತ್ಕಲ್, ಎಂ.ಜಿ.ಹೆಗಡೆ, ಕೆ.ಎನ್.ಸೋಮಶೇಖರ್, ಯೋಗೀಶ್ ಕುಮಾರ್ ಜೆಪ್ಪು, ಎಸ್.ಜಯರಾಮ್, ಯತೀಶ್ ಬೈಕಂಪಾಡಿ, ಆಶಾ ಜಗದೀಶ್ ಮತ್ತಿತರರು ಪ್ರಶ್ನೆಗಳನ್ನು ಕೇಳಿದರು.

ವಿ4 ದಶಮ ಸಂಭ್ರಮವನ್ನು ರಂಗಭೂಮಿ ಕಲಾವಿದ ವಿ.ಜಿ.ಪಾಲ್, ಯತೀಶ್ ಬೈಕಂಪಾಡಿ, ಚಿದಂಬರ ಬೈಕಂಪಾಡಿ, ವಿ4 ನಿರ್ದೇಶ ಲಕ್ಷ್ಮಣ್‌ಕುಂದರ್ ಅವರ ಸಮ್ಮುಖದಲ್ಲಿ ಹರೀಶ್ ಕರ್ಕೇರ ಉದ್ಘಾಟಿಸಿದರು.

ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರ ನೇತೃತ್ವದಲ್ಲಿ ತೆಂಕು ಬಡಗು ದ್ವಂದ್ವ ಭಾಗವತಿಕೆಯ ಬಲ್ಲಿರೇನಯ್ಯ ಕಾರ್ಯಕ್ರಮ, ಪೇರೂರು ಜಾರು ಅವರ ನೇತೃತ್ವದಲ್ಲಿ ಜಾರು ಆಟ, ಚಿದಂಬರ ಬೈಕಂಪಾಡಿ ನೇತೃತ್ವದಲ್ಲಿ ಕರಾವಳಿಯ ಪ್ರಗತಿಯ ಹಾದಿಯ ಕುರಿತ ಚರ್ಚೆ ನಡೆಯಿತು. ಯತೀಶ್ ಬೈಕಂಪಾಡಿ ನೇತೃತ್ವದಲ್ಲಿ ತುಳು ದಿಗ್ಗಜರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಪಶ್ಚಿಮ ಘಟ್ಟ ಇರುವವರೆಗೆ ನೀರಿಗೆ ಬರಗಾಲ ಬರದು

ಪಶ್ಚಿಮ ಘಟ್ಟ ಇರುವವರೆಗೆ ನಮಗೆ ನೀರಿಗೆ ಬರಗಾಲ ಬಾರದು. ಆದರೆ ಪಶ್ಚಿಮ ಘಟ್ಟಕ್ಕೆ ಹೊಡೆತ ನೀಡುವ ಎತ್ತಿನಹೊಳೆ ಯೋಜನೆ ಮೂರ್ಖತನದ್ದು. ಇಲ್ಲಿಯ ನೀರು ಈಗಿನ ಉದ್ಯಮಗಳಿಗೂ ಸಾಕು, ನೀರನ್ನೇ ಆಶ್ರಯಿಸಿ ಸ್ಥಾಪನೆಯಾಗುವ ಕಾರ್ಖಾನೆಗಳಿಗೂ ಸಾಕು. ಆದರೆ ಅದನ್ನು ಸಂರಕ್ಷಣೆ ಮಾಡುವ ಕಾರ್ಯ ಆಗಬೇಕು ಎಂದು ಪ್ರೊ. ಮಯ್ಯ ಅಭಿಪ್ರಾಯಿಸಿದರು.

ಪಶ್ಚಿಮ ವಾಹಿನಿಯೂ ಜನರನ್ನು ಮೋಸ ಮಾಡುವ ಯೋಜನೆ!

ಈಗ ಸರಕಾರ ಪ್ರತಿಪಾದಿಸುತ್ತಿರುವ ಪಶ್ಚಿಮ ವಾಹಿನಿ ಎಂಬುದು ಕೂಡಾ ಜನರನ್ನು ಮೋಸ ಮಾಡುವ ಯೋಜನೆ. ಅದನ್ನು ಅನುಷ್ಠಾನಕ್ಕೆ ತರುವ ನೀರಾವರಿ ಇಲಾಖೆ ಅಧಿಕಾರಿಗಳ ಬಳಿ ಕೇಳಿದಾಗ, ಅಂಥ ಯೋಜನೆಯೇ ಇಲ್ಲ ಎನ್ನುತ್ತಾರೆ. ಇಲ್ಲದ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಇಡುವುದು ಮೂರ್ಖತನವಲ್ಲವೇ ಎಂದು ಪ್ರೊ. ಮಯ್ಯ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News