×
Ad

ಶಾಲೆ ಬಿಟ್ಟು ಕೆಲಸ ಮಾಡುತ್ತಿರುವ ಗಾಝಾದ ಮಕ್ಕಳು ಯುದ್ಧ, ನಿರುದ್ಯೋಗದ ಪರಿಣಾಮ

Update: 2016-06-11 19:36 IST

ಗಾಝಾ ಸಿಟಿ, ಜೂ. 11: ಸಂಘರ್ಷ ಪೀಡಿತ ಫೆಲೆಸ್ತೀನ್‌ನಲ್ಲಿ ಮಕ್ಕಳು ಶಾಲೆಗೆ ಹೋಗುವ ಬದಲು ತಮ್ಮ ಕುಟುಂಬಗಳಿಗೆ ಆಸರೆಯಾಗಲು ಚಿಂದಿ ಆಯುವ ಕೆಲಸ ಮಾಡುತ್ತಿದ್ದಾರೆ.

11 ವರ್ಷದ ವಾಲಿದ್ ಮಅರೂಫ್ ಮತ್ತು 12 ವರ್ಷದ ಇಬ್ರಾಹೀಂ ಘಬೇನ್ ಗಾಝಾದಲ್ಲಿ ಯುದ್ಧಗಳಿಂದ ಧ್ವಂಸಗೊಂಡ ಮನೆಗಳ ಅವಶೇಷಗಳಡಿ ಏನಾದರೂ ಗುಜರಿ ವಸ್ತುಗಳು ಸಿಗುತ್ತವೆಯೇ ಎಂದು ಹುಡುಕುತ್ತಾರೆ.

ಅವರು ಒಂದು ಕಾಲದಲ್ಲಿ ಒಳ್ಳೆಯ ವಿದ್ಯಾರ್ಥಿಗಳಾಗಿದ್ದರು. ಈಗ ಅವರ ತಂದೆಯಂದಿರು ಕೆಲಸ ಕಳೆದುಕೊಂಡಿದ್ದು, ಕುಟುಂಬಕ್ಕೆ ಆಸರೆಯಾಗಲು ಶಾಲೆ ಬಿಟ್ಟು ಜೀವನೋಪಾಯ ಗಳಿಸುತ್ತಿದ್ದಾರೆ.

ಇಸ್ರೇಲ್ ಮತ್ತು ಗಾಝಾ ಪಟ್ಟಿಯಲ್ಲಿರುವ ಫೆಲೆಸ್ತೀನ್ ಬಂಡುಕೋರರು 2008ರ ಬಳಿಕ ಮೂರು ಯುದ್ಧಗಳಲ್ಲಿ ಹೋರಾಡಿದ್ದಾರೆ. 2014ರಲ್ಲಿ ನಡೆದ ಭೀಕರ ಯುದ್ಧ 50 ದಿನಗಳವರೆಗೆ ಸಾಗಿತ್ತು.

ಇಸ್ರೇಲ್ 10 ವರ್ಷಗಳ ಹಿಂದೆ ವಿಧಿಸಿರುವ ದಿಗ್ಬಂಧನದ ಅಡಿಯಲ್ಲೇ ಗಾಝಾ ಪಟ್ಟಣದ ನಿವಾಸಿಗಳು ಬದುಕುತ್ತಿದ್ದಾರೆ. ಈಗ ಈಜಿಪ್ಟ್‌ನ ನಿರ್ಬಂಧಗಳಿಂದ ಅವರ ಬದುಕು ಇನ್ನಷ್ಟು ದುರ್ಭರವಾಗುತ್ತಿದೆ. ಈಜಿಪ್ಟ್ ಗಾಝಾದೊಂದಿಗಿನ ತನ್ನ ಗಡಿಯನ್ನು 2013ರಿಂದ ಮುಚ್ಚಿದೆ.

ಇಲ್ಲಿನ 19 ಲಕ್ಷ ನಿವಾಸಿಗಳ ಪೈಕಿ ಅರ್ಧದಷ್ಟು ಮಂದಿ ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ. ಅವರ ಪೈಕಿ 80 ಶೇಕಡ ಮಂದಿ ಮಾನವೀಯ ನೆರವು ಯೋಜನೆಗಳಡಿ ಬದುಕುತ್ತಿದ್ದಾರೆ.

ನಿರುದ್ಯೋಗ ಸಮಸ್ಯೆ ಇಲ್ಲಿ ಬಿಗಡಾಯಿಸಿದೆ. ಅದರ ಪ್ರಮಾಣ 45 ಶೇಕಡಕ್ಕೆ ಏರಿದೆ. ಇದು ಜಗತ್ತಿನಲ್ಲೇ ಅತ್ಯಂತ ಹೆಚ್ಚು. ಹಾಗಾಗಿ, ಹೆಚ್ಚಿನ ಮಕ್ಕಳು ಜೀವನೋಪಾಯ ಗಳಿಸುವ ದಾರಿಗೆ ಇಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News