ಬಂದಿದೆ ಸ್ವಯಂಚಾಲಿತ ರೇಷನ್ ವಿತರಣಾ ಯಂತ್ರ
ಉಡುಪಿ, ಜೂ.11: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಜಿಎಸ್‌ಎಂ ಮೊಬೈಲ್ ಹಾಗೂ ಬ್ಯಾನ್ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಪಡಿತರ ವಿತರಿಸುವ ಸ್ವಯಂ ಚಾಲಿತ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಪಡಿತರ ಸಾಮಗ್ರಿಗಳನ್ನು ತೂಕ ಮಾಡುವಾಗ ತಪ್ಪುಗಳು ಸಂಭವಿಸಿ ಗ್ರಾಹಕರು ಮೋಸಹೋಗಬಹುದು. ಒಂದು ವೇಳೆ ಗ್ರಾಹಕರು ತಿಂಗಳ ಸಾಮಗ್ರಿಗಳನ್ನು ತೆಗೆದುಕೊಳ್ಳದೇ ಇದ್ದಾಗ ವಿತರಕರು ಅವುಗಳನ್ನು ಅನಧಿಕೃತವಾಗಿ ಇತರರಿಗೆ ಮಾರಾಟ ಮಾಡಿ ವ್ಯವಸ್ಥೆಯನ್ನು ದುರುಪಯೋಗಪಡಿಸಬಹುದು.
ಪ್ರಸ್ತಾವಿತ ವ್ಯವಸ್ಥೆಯಲ್ಲಿ ಸಾಮಗ್ರಿಗಳನ್ನು ಪಡೆಯಲು ಗ್ರಾಹಕನು ಮೊದಲು ಬ್ಯಾನ್(ಬಾಡಿ ಏರಿಯಾ ನೆಟ್ವರ್ಕ್) ರೀಡರ್ ಯಂತ್ರವನ್ನು ಸ್ಪರ್ಶಿಸಬೇಕಾಗುತ್ತದೆ. ತಕ್ಷಣ ಯಂತ್ರವು ಗ್ರಾಹಕನ ಕೋಡ್ ಅನ್ನು ಪರಿಶೀಲಿಸಿ ತಿಂಗಳ ಸಾಮಗ್ರಿಗಳ ಪಟ್ಟಿಯನ್ನು ಒದಗಿಸುತ್ತದೆ. ಗ್ರಾಹಕನು ತನಗೆ ಅಗತ್ಯವಿರುವ ಸಾಮಗ್ರಿಗಳ ಮೊತ್ತವನ್ನು ಕೀಪ್ಯಾಡ್ ಮೂಲಕ ದಾಖಲಿಸಬೇಕು. ಕೂಡಲೇ ಈ ಸ್ವಯಂಚಾಲಿತ ಯಂತ್ರವು ಸಾಮಗ್ರಿಗಳನ್ನು ಗ್ರಾಹಕನಿಗೆ ವಿತರಿಸುತ್ತದೆ ಮತ್ತು ಈ ಬಗ್ಗೆ ಸಂದೇಶವನ್ನು ಗ್ರಾಹಕನಿಗೂ, ಸರಕಾರಿ ಕಚೇರಿಗೂ ಕಳುಹಿಸುತ್ತದೆ. ಈ ರೀತಿಯಾಗಿ ರೇಷನ್ ವಿತರಣೆಯು ಸುಲಲಿತವಾಗಿ ನಡೆದು, ಆಹಾರ ಸಾಮಾಗ್ರಿಗಳ ಪೋಲಾಗುವಿಕೆಯನ್ನು ತಡೆಗಟ್ಟಬಹುದು.
ವಿದ್ಯಾರ್ಥಿಗಳಾದ ವೆಂಕಟೇಶ ದಿವಾಕರ, ಹಿತೇಶ ಕುಮಾರ್, ಸುದೀಪ ನಾಯಕ್, ಎಚ್. ವಿಶ್ವನಾಥ, ಸಹಾಯಕ ಪ್ರಾಧ್ಯಾಪಕಿ ಕುಸುಮಾ ಪ್ರಭು ಮತ್ತು ವಿಭಾಗ ಮುಖ್ಯಸ್ಥ ಡಾ.ಬಾಲಚಂದ್ರ ಆಚಾರ್ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಈ ಯೋಜನೆಯನ್ನು ಸಿದ್ಧಪಡಿಸಿದ್ದಾರೆ.