ಮಗಳಿಗೆ ಜೀವಬೆದರಿಕೆಯಿದೆ: ರಾಜೀನಾಮೆ ಅಂಗೀಕಾರ ಸರಿಯಲ್ಲವೆಂದು ಕಣ್ಣೀರಿಟ್ಟ ಅನುಪಮಾ ತಾಯಿ
ಪಡುಬಿದ್ರೆ, ಜೂ.11: ನನ್ನ ಮಗಳು ಎಲ್ಲಿದ್ದಾಳೆ ಎಂಬುವುದು ತಿಳಿದಿಲ್ಲ. ಅವಳನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಸದ್ಯಕ್ಕೆ ಊರಿಗೆ ಬರುವುದಿಲ್ಲ. ತನಗಾದ ಅನ್ಯಾಯವನ್ನು ಸರಿಪಡಿಸಿ ಬರುವುದಾಗಿ ಹೇಳಿದ್ದಾಳೆ. ಆ ಬಳಿಕ ನಮ್ಮನ್ನು ಸಂಪರ್ಕಿಸಿಲ್ಲ. ಈಗಲೂ ಅವಳಿಗೆ ಜೀವಬೆದರಿಕೆ ಇದೆ. ಆಕೆಗೆ ರಕ್ಷಣೆ ಬೇಕಾಗಿದೆ. ಈಗ ಒಬ್ಬಂಟಿಯಾಗಿ ಬಹಳ ನೊಂದಿದ್ದಾಳೆ. ಅವಳಿಗೆ ಯಾರ ಸಹಕಾರವೂ ಇಲ್ಲ.
ಹೀಗೆಂದು ಸುದ್ದಿಗಾರರೊಂದಿಗೆ ಶನಿವಾರ ರಾಜೀನಾಮೆ ಅಂಗೀಕಾರವಾದ ಬಳಿಕ ಮೊದಲ ಬಾರಿಗೆ ಉಚ್ಚಿಲದಲ್ಲಿರುವ ಮನೆಗೆ ಆಗಮಿಸಿದ ಅನುಪಮಾ ಶೆಣೈ ತಾಯಿ ನಳಿನಿ ಶೆಣೈ ಕಣ್ಣೀರಿಟ್ಟರು.
ರಾಜಿನಾಮೆ ಅಂಗೀಕಾರ ಸರಿಯಲ್ಲ
ಆಕೆ ರಾಜಿನಾಮೆ ನೀಡಿರುವ ಬಗ್ಗೆ ಜನರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕಾಗಿತ್ತು. ಒಂದು ಜನನ ಪತ್ರ ಪಡೆದುಕೊಳ್ಳಲು ಆರು ತಿಂಗಳ ಕಾಲ ಸಮಯಾವಕಾಶ ಇರುತ್ತದೆ. ಪಡಿತರ ಚೀಟಿ ಪಡೆದುಕೊಳ್ಳಲು ವಿಳಂಬ ಮಾಡುತ್ತಾರೆ. ಆದರೆ ರಾಜೀನಾಮೆ ನೀಡಿದ್ದಾಳೆ ಎಂದ ಮಾತ್ರಕ್ಕೆ ನಾಲ್ಕೇ ದಿನದಲ್ಲಿ ರಾಜಿನಾಮೆ ಅಂಗೀಕರಿಸಿರುವುದು ಸರಿಯಲ್ಲ. ರಾಜೀನಾಮೆ ಅಂಗೀಕರಿಸಲು 90ದಿನಗಳ ಕಾಲಾವಕಾಶ ಇದೆ. ಆಕೆಯ ರಾಜೀನಾಮೆಯಿಂದ ನಮಗೆ ದಿಕ್ಕು ತೋಚದಂತಾಗಿದೆ. ಈ ಬಗ್ಗೆ ಸರಕಾರ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೂಡ್ಲಿಗಿಯ ಪರಿಸ್ಥಿತಿ ಅನುಪಮಾರವರು ಕೆಲಸ ಮಾಡುವಂತಿರಲಿಲ್ಲ. ಅಪರಿಚಿತ ವ್ಯಕ್ತಿಗಳು ರಾತ್ರಿ ಹೊತ್ತು ಮನೆಯ ಬಾಗಿಲು ಬಡಿದು ಕಿರುಕುಳ ನೀಡುತ್ತಿದ್ದರು. ಮಧ್ಯ ರಾತ್ರಿ ಹೊತ್ತು ಅಪಚಿರಿತ ವ್ಯಕ್ತಿಗಳ ಬೆದರಿಕೆ ಕರೆಗಳು ಬರುತಿದ್ದವು. ಆದರೆ ಆಕೆ ಧೈರ್ಯದಿಂದ ಎದುರು ಉತ್ತರ ನೀಡುತ್ತಾ, ಯಾವುದೋ ಎಸ್‌ಟಿಡಿಯಲ್ಲಿ ಮಾತನಾಡಿ ನಿನ್ನ ಶೌರ್ಯ ತೋರಿಸುವುದು ಬೇಡ. ನಿನ್ನ ಧಮಕಿಗೆ ಹೆದರುವವಳು ನಾನಲ್ಲ ಎಂದು ಹೇಳಿದ್ದು ಗೊತ್ತಿದೆ. ಅಲ್ಲಿ ಅವಳು ನಿದ್ದೆ ಇಲ್ಲದ ರಾತ್ರಿ ಕಳೆದಿದ್ದುದೂ ನೆನಪಿದೆ. ನಾನು ಆಗಲೇ ಅವಳಿಗೆ ಹೇಳಿದ್ದೆ, ನೀನು ಟ್ರಾನ್ಸ್‌ಫರ್ ಪಡೆದು ಬೇರೆ ಕಡೆಗೆ ಹೋಗಬಹುದಲ್ಲಾ ಎಂದಾಗ, ನಾನೇನು ತಪ್ಪು ಮಾಡಿಲ್ಲ. ನಾನ್ಯಾಕೆ ಹೋಗಲಿ ಎಂದು ನನ್ನನ್ನೇ ಪ್ರಶ್ನಿಸಿದ್ದಾಳೆ.
ಉಡುಪಿ ಎಸ್ಪಿ ಅಣ್ಣಾಮಲೈ ಅವರು ನನಗೆ ದೂರವಾಣಿ ಕರೆ ಮಾಡಿ ಒಮ್ಮೆ ಅನುಪಮಾರರನ್ನು ಮಾತನಾಡಿಸುವಂತೆ ಮನವಿ ಮಾಡಿದ್ದರು. ಅಂತೆಯೇ ಅವಳ ರಾಜಿನಾಮೆಯನ್ನು ಹಿಂಪಡೆಯುವಂತೆ ನನ್ನನ್ನು ಒತ್ತಾಯಿಸಿದ್ದರು. ಆದರೆ ಆಕೆ ಅವರೊಂದಿಗೆ ಮಾತನಾಡಿಲ್ಲ. ನಾನು ಅವಳಿಗೆ ಹೇಳುವ ಪರಿಸ್ಥಿತಿಯಲ್ಲಿಲ್ಲ. ಬಳ್ಳಾರಿ ಪೊಲೀಸರೂ ಇಲ್ಲಿಗೆ ಭೇಟಿ ನೀಡಿ ನಮಗೆ ಸಾಂತ್ವನ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಅನುಪಮಾ ಹಾಗೂ ಅಲ್ಲಿಯ ಎಸ್ಪಿಯವರ ಬಗ್ಗೆ ಉತ್ತಮ ಅಭಿಪ್ರಾಯ ಇದೆ. ಆದರೆ ಅಲ್ಲಿಯ ರಾಜಕಾರಣಿಗಳು ಉತ್ತಮ ಕೆಲಸ ಮಾಡಲು ಪೂರಕ ವಾತಾವರಣ ಕಲ್ಪಿಸುತ್ತಿಲ್ಲ ಎಂದರು.
ಆಕೆಯದಲ್ಲ
ಫೇಸ್‌ಬುಕ್ ಬಗ್ಗೆ ಪ್ರಶ್ನಿಸಿದಾಗ, ಆಕೆ ಅಂತಹಾ ಭಾಷೆಯನ್ನು ಎಂದೂ ಬಳಸುತ್ತಿಲ್ಲ. ಆಕೆಯ ಹೆಸರಿನಲ್ಲಿ ಯಾರೋ ಬಳಸುತ್ತಿರಬೇಕು ಎಂದರು.